ವಾಲ್ಮೀಕಿ ಮಠದ ಪೀಠಾಧ್ಯಕ್ಷರಾಗಿರುವ ಪ್ರಸನ್ನಾನಂದಪುರಿ ಸ್ವಾಮೀಜಿ ಮದುವೆಯಾಗಿ ಸಂಸಾರಸ್ಥರಾಗಿದ್ದಾರೆ ಎಂಬ ಆರೋಪವಿದ್ದು, ಕೂಡಲೇ ಅವರು ಪೀಠ ತ್ಯಾಗ ಮಾಡಬೇಕು.
ಬೆಂಗಳೂರು : ರಾಜ್ಯದ ಹರಿಹರದ ರಾಜನಹಳ್ಳಿಯಲ್ಲಿರುವ ವಾಲ್ಮೀಕಿ ಮಠದ ಪೀಠಾಧ್ಯಕ್ಷರಾಗಿರುವ ಪ್ರಸನ್ನಾನಂದಪುರಿ ಸ್ವಾಮೀಜಿ ಮದುವೆಯಾಗಿ ಸಂಸಾರಸ್ಥರಾಗಿದ್ದಾರೆ ಎಂಬ ಆರೋಪವಿದ್ದು, ಕೂಡಲೇ ಅವರು ಪೀಠ ತ್ಯಾಗ ಮಾಡಬೇಕು ಎಂದು ಶ್ರೀ ಮಹರ್ಷಿ ವಾಲ್ಮೀಕಿ ಗುರುಪೀಠ ಸಂರಕ್ಷಣಾ ಹೋರಾಟಗಾರರು ಆಗ್ರಹಿಸಿದ್ದಾರೆ.
ಈ ಕುರಿತು ಶ್ರೀ ಮಹರ್ಷಿ ವಾಲ್ಮೀಕಿ ಗುರುಪೀಠ ಸಂರಕ್ಷಣಾ ಹೋರಾಟಗಾರರಿಂದ ಬೆಂಗಳೂರಿನ ಗಾಂಧಿಭವನದಲ್ಲಿ ಪ್ರತ್ಯೇಕ ಸಭೆ ಮಾಡಿದ ಅವರು, ಪ್ರಸನ್ನಾನಂದಪುರಿ ಸ್ವಾಮೀಜಿ ಮೇಲೆ ಸಾಕಷ್ಟು ಅಕ್ರಮ ಮತ್ತು ಅನೈತಿಕ ಸಂಬಂಧ ಆರೋಪವಿದೆ. ಕೂಡಲೇ ಸ್ವಾಮೀಜಿ ಪೀಠದಿಂದ ಇಳಿಯಯಬೇಕು ಎಂದು ಆಗ್ರಹ ಮಾಡಿದ್ದಾರೆ. ಈ ಸಭೆಯಲ್ಲಿ ಚಿಕ್ಕಬಳ್ಳಾಪುರ ಬ್ರಹ್ಮಾನಂದಸ್ವಾಮೀಜಿ, ರಾಯಚೂರಿನ ಭೋಲಪಲ್ಲಿ ಮಠದ ವರದರಾಜ ಸ್ವಾಮೀಜಿ, ಮಸ್ಕಿಯ ಆತ್ಮಾನಂದ ಸ್ವಾಮೀಜಿ ಹಾಗೂ ವಾಲ್ಮೀಕಿ ಸಮುದಾಯದ ಮುಖಂದ ಶ್ರೀರಂಗಯ್ಯ ಸೇರಿದಂತೆ ಹಲವರು ರಾಜನಹಳ್ಳಿ ವಾಲ್ಮೀಕಿ ಗುರುಪೀಠ ಟ್ರಸ್ಟ್ ಸಭೆಯಲ್ಲಿ ಭಾಗಿಯಾಗಿದ್ದರು.
ಗಾಂಧಿ ಭವನದಲ್ಲಿ ಅತೃಪ್ತರ ಸಭೆ: ಇನ್ನು ಸಭೆ ಆರಂಭದಲ್ಲೇ ಸ್ವಾಮೀಜಿ ವಿರುದ್ಧದ ಮಾತನಾಡಿದ್ದಕ್ಕೆ, ಸ್ವಾಮೀಜಿ ಬೆಂಬಲಿಗನಿಂದ ಆಕ್ರೋಶ ವ್ಯಕ್ತವಾಯಿತು. ಸ್ವಾಮೀಜಿ ಪರ ಮಾತನಾಡಿದ ಬೆಂಬಲಿಗನಿಗೆ ಕೆಲ ಸದಸ್ಯರು ಥಳಿಸಿದ್ದಾರೆ. ಕೂಡಲೇ ಮಧ್ಯ ಪ್ರವೇಶಿಸಿದ ಕೆಲ ಸದಸ್ಯರು ಸ್ವಾಮೀಜಿ ಬೆಂಬಲಿಗನನ್ನು ಬೈದು ಗಾಂಧಿ ಭವನದಿಂದ ಹೊರಕಳಿಸಿದರು. ಈ ಬಗ್ಗೆ ಮಾತನಾಡಿದ ಸಿಂಗಾಪುರ ವೆಂಕಟೇಶ್ ಅವರು, ಮಠದಲ್ಲಿ ಸಾಕಷ್ಟು ದುರುಪಯೋಗವಾಗಿದೆ. ಮಠದಲ್ಲಿ ಯಾವುದೇ ಅಭಿವೃದ್ಧಿ ಆಗ್ತಿಲ್ಲ. ಸ್ವಾಮೀಜಿಗಳು ಅವರ ಇಷ್ಟಕ್ಕೆ ತಕ್ಕಂತೆ ನಡೆದುಕೊಳ್ಳುತ್ತಿದ್ದಾರೆ. ಶಾಂತಿಯುತವಾಗಿ ನಾವು ಸಭೆ ಮಾಡುತ್ತಿದ್ದರೆ ಸ್ವಾಮೀಜಿಯವರೇ ಇಲ್ಲಿಗೆ ಆ ವ್ಯಕ್ತಿಯನ್ನ ಕಳಿಸಿದ್ದಾರೆ. ಇದು ಸ್ವಾಮೀಜಿ ಷಡ್ಯಂತ್ರವಾಗಿದೆ ಎಂದು ಆರೋಪ ಮಾಡಿದರು.
ಸೊಂಟದ ಕೆಳಗಿನದ್ದೇ ಮಾತು: ಇನ್ನು ಪ್ರಸನ್ನಾನಂದಪುರಿ ಸ್ವಾಮೀಜಿ ನಮ್ಮ ಸಮಾಜದ ಪೀಠವನ್ನು ತ್ಯಜಿಸಿ ಹೋಗಲಿ. ಅವರಿಗೆ ಮದುವೆ ಆಗಿದೆ ಎಂಬ ಆರೋಪ ಸಹ ಇದೆ. ಅಲ್ಲದೇ ಒಬ್ಬ ಸ್ವಾಮೀಜಿ ಸೊಂಟದ ಕೇಳಗಿನದ್ದೇ ಬರೀ ಮಾತನಾಡುತ್ತಾರೆ. ಇಂಥ ಸ್ವಾಮೀಜಿ ನಮಗೆ ಬೇಕಾಗಿಲ್ಲ. ನಮ್ಮ ಪೀಠ ನೋಡಿಕೊಳ್ಳಲು ಸಮಾಜದ ಜನರಿದ್ದಾರೆ. ಈ ಪೀಠಕ್ಕೆ ಸೂಕ್ತ ವ್ಯಕ್ತಿ ತರುವ ತನಕ ನಾವು ಹೋರಾಟ ನಡೆಸುತ್ತೇವೆ ಎಂದು ಶ್ರೀ ಮಹರ್ಷಿ ವಾಲ್ಮೀಕಿ ಗುರುಪೀಠ ಸಂರಕ್ಷಣಾ ಹೋರಾಟಗಾರ ಸಿಂಗಾಪುರ ವೆಂಕಟೇಶ್ ಮಾತನಾಡಿದರು.
ಸಚಿವರಿಗೆ ದೂರು ನೀಡಲು ನಿರ್ಧಾರ: ಬೆಂಗಳೂರಿನಲ್ಲಿ ನಡೆದ ಸಭೆಯಲ್ಲಿ ವಾಲ್ಮೀಕಿ ಗುರುಪೀಠದ ಪ್ರಸನ್ನಾನಂದಪುರಿ ಸ್ವಾಮೀಜಿ ವಿರುದ್ಧ ಸಚಿವರಿಗೆ ದೂರು ನೀಡಲು ನಿರ್ಧಾರ ಮಾಡಲಾಯಿತು. ಅವರು ಪೀಠದ ಏಳಿಗಾಗಿ ಏನು ಮಾಡಿಲ್ಲ. ನಮ್ಮ ಸಮುದಾಯ ಬಿಟ್ಟು ಬೇರೆ ಸಮುದಾಯದ ಪರ ಆಗಿದ್ದಾರೆ. ಇಂದಿನ ಸಭೆಯ ನಿರ್ಣಯವನ್ನ ಸಚಿವ ಸತೀಶ್ ಜಾರಕಿಹೊಳಿಗೆ ನೀಡುತ್ತೇವೆ. ಇನ್ನು ಸ್ವಾಮೀಜಿಯವರು ನಮ್ಮ ಪ್ರಶ್ನೆಗೆ ಮೊದಲು ಉತ್ತರಿಸಬೇಕು. ಮಠದ ಪೀಠಾಧಿಪತಿ ಆಗಿದ್ದರೂ ಸಂಸಾರಸ್ತರಾಗಿದ್ದಾರಾ? ಅವರಿಗೆ ಮದುವೆ ಆಗಿದೆಯೇ? ಇದೆಲ್ಲದಕ್ಕೂ ಸ್ವಾಮೀಜಿ ಸ್ಪಷ್ಟನೆ ಕೊಡಬೇಕು ಎಂದು ಆಗ್ರಹಿಸಿದರು.
ಇದು ಸಮಾಜದ ಹೋರಾಟ, ವೈಯಕ್ತಿಕ ಹೋರಾಟವಲ್ಲ: ಈ ಕುರಿತು ಮಾತನಾಡಿದ ವಾಲ್ಮೀಕಿ ಬ್ರಹ್ಮಾನಂದ ಸ್ವಾಮೀಜಿ ಅವರು, ಸಭೆಯ ಉದ್ದೇಶ ವಾಲ್ಮೀಕಿ ಗುರುಪೀಠದ ಸ್ವಾಮೀಜಿ ನಡೆ ನುಡಿ ಸರಿಯಿಲ್ಲ. ಹೋರಾಟಗಾರರು ಪ್ರಶ್ನೆ ಮಾಡಿದ್ದರು. ಮಠದಲ್ಲಿ ಅನ್ಯ ಸಮಾಜದವರನ್ನ ಮಠದ ಕೆಲಸಕ್ಕೆ ಸೇರಿಸಿಕೊಂಡಿದ್ದಾರೆ. ಸಮಾಜದ ಸಮಸ್ಯೆ, ಜನರಿಗೆ ಸ್ಪಂದಿಸಿಲ್ಲ. ಶಿಕ್ಷಣ, ರಾಜಕೀಯ ಯಾವುದೇ ಅಭಿವೃದ್ಧಿಗೆ ಮಾಡಿಲ್ಲ. ಹೀಗಾಗಿ ಅವರು ಪೀಠ ತ್ಯಾಗ ಮಾಡಬೇಕು. ಇದು ಸಮಾಜದ ಹೋರಾಟವಾಗಿದ್ದು, ವೈಯಕ್ತಿಕ ಹೋರಾಟವಲ್ಲ ಎಂದರು.