ಲಿಂಗಸುಗೂರು: ಲಿಂಗಸುಗೂರು ತಾಲ್ಲೂಕಿನಲ್ಲಿರುವ ಅಮರೇಶ್ವರ ದೇವಸ್ಥಾನಕ್ಕೆ ಬರುವ ಭಕ್ತರು ದಾಸೋಹಕ್ಕೆಂದು ನೀಡಿದ ಹಣವನ್ನು ವ್ಯಯಕ್ತಿಕ ಖಾತೆಗೆ ಜಮಾಮಾಡಿಕೊಂಡು ಅವ್ಯವಹಾರದಲ್ಲಿ ಭಾಗಿಯಾದವರ ವಿರುದ್ಧ ಕಾನೂನು ಕ್ರಮ ಜರುಗಿಸುವಂತೆ ಆಗ್ರಹಿಸಿ ನಮ್ಮ ಕರ್ನಾಟಕ ಸೇನೆ ಪದಾಧಿಕಾರಿಗಳು ಪಟ್ಟಣದಲ್ಲಿ ಪ್ರತಿಭಟಿಸಿ ಸಹಾಯಕ ಆಯುಕ್ತರಿಗೆ ಮನವಿ ಸಲ್ಲಿಸಿದರು.
ತಾಲೂಕಿನ ಪುರಾಣ ಪ್ರಸಿದ್ಧ ಪುಣ್ಯ ಕ್ಷೇತ್ರವಾದ ಅಮರೇಶ್ವರ ದೇವಸ್ಥಾನದಲ್ಲಿ 1997ರ ಕಾಯ್ದೆ ಮತ್ತು ಅಧಿನಿಯಮ 2002 ಕಲಂ 69 ಬಿ ಪ್ರಕಾರ ಈ ದೇವಸ್ಥಾನದ ವ್ಯಾಪ್ತಿಯಲ್ಲಿ ಬರದ ಹಾಗೂ ತಾಲೂಕಿನವರಲ್ಲದವರು ಅನಧಿಕೃತವಾಗಿ ದಾಸೋಹ ನಡೆಸುತ್ತಿದ್ದಾರೆ. ಆದರೆ ಭಕ್ತರು ದಾಸೋಹಕ್ಕೆಂದು ಕಾಣಿಕೆ ರೂಪದಲ್ಲಿ ನೀಡಿದ ಹಣವನ್ನು ತಮ್ಮ ತಮ್ಮ ವ್ಯಯಕ್ತಿಕ ಖಾತೆಗಳಿಗೆ ಜಮಾ ಮಾಡಿಕೊಳ್ಳುತ್ತಿದ್ದಾರೆ. ಇದರಿಂದ ಭಕ್ತರು ನೀಡಿದ ಹಣದಲ್ಲಿ ಕೋಟ್ಯಾಂತರ ರೂಪಾಯಿಗಳ ಅವ್ಯವಹಾರವಾಗಿದ್ದು ಈ ಅವ್ಯವಹಾರದಲ್ಲಿ ಭಾಗಿಯಾದವರ ಮೇಲೆ ಧಾರ್ಮಿಕ ಧತ್ತಿ ಕಾಯ್ದೆಯಡಿಯಲ್ಲಿ ಕಾನೂನು ಕ್ರಮಕ್ಕೆ ಮುಂದಾಗಬೇಕು ಎಂದು ಆಗ್ರಹಿಸಿದರು.
ಈ ವೇಳೆ ನಮ್ಮ ಕರ್ನಾಟಕ ಸೇನೆ ತಾಲೂಕಾಧ್ಯಕ್ಷ ಶಿವರಾಜ ನಾಯ್ಕ್, ಪ್ರಧಾನ ಕಾರ್ಯದರ್ಶಿ ನಿರುಪಾದಿ ಹಿರೇಮಠ, ಚಂದ್ರು ಹಿರೇಮಠ, ವೆಂಕಟೇಶ ಗುಡದನಾಳ, ಚಂದ್ರಕಾಂತ ಭೋವಿ, ದೇವೆಂದ್ರ ನಾಯಕ, ಶಿವರಾಜ ಅಲಬನೂರು, ಶಂಕರ ಚೌಹಾಣ್, ರುದ್ರಯ್ಯಸ್ವಾಮಿ, ರಮೇಶ ಭೋವಿ, ಮಹಾಂತಯ್ಯ ಸ್ವಾಮಿ,ರಾಜು ಪತ್ತಾರ, ಶಿವಲಿಂಗ ಪುರಿ, ಬಸವಲಿಂಗ ಯಲಗಲದಿನ್ನಿ, ರಾಘವೇಂದ್ರ ಖೈರವಾಡಗಿ, ವೆಂಕಟೇಶ ಗುತ್ತೇದಾರ, ಕೃಷ್ಣಾ ಭೋವಿ, ಲಕ್ಷ್ಮಣ ಭೋವಿ, ರಾಜು ನಾಯಕ, ವಿವೇಕಾನಂದ ನಾಯಕ ಸೇರಿದಂತೆ ಇನ್ನಿತರರು ಇದ್ದರು.