ಬೀದರ್ : ಪ್ರಯಾಣ ದರವನ್ನು ಶೇಕಡಾ.15 ರಷ್ಟು ಹೆಚ್ಚಳ ಮಾಡಿದ ಸರ್ಕಾರದ ನಿರ್ಧಾರವನ್ನು ಖಂಡಿಸಿ ದಿನಾಂಕ:06-01-2025 ರಂದು ಬೀದರ ನಗರದಲ್ಲಿ ಕೇಂದ್ರ ಬಸ್ಸ್ ನಿಲ್ದಾಣ ಮುಂದೆ ಪ್ರತಿಭಟನೆ ಮಾಡಲಾಯಿತು.ಕರ್ನಾಟಕ ರಾಜ್ಯ ಸರ್ಕಾರ ಬಸ್ ಪ್ರಯಾಣ ದರವನ್ನು 15% ರಷ್ಟು ಹೆಚ್ಚಳ ಮಾಡುವುದರ ಮೂಲಕ ಬಡ, ಕೂಲಿ ಕಾರ್ಮಿಕರು, ಮಧ್ಯಮವರ್ಗದ ಜನತೆಗೆ ಹೊರೆಯನ್ನ ಹೇರಿದಂತಾಗಿದೆ.
ಸರ್ಕಾರಿ ಬಸ್‌ಗಳನ್ನೇ ಅವಲಂಬಿಸಿ ಸಾವಿರಾರು ಜನ ದಿನನಿತ್ಯ ತಮ್ಮ ಕೆಲಸ ಕಾರ್ಯಗಳಿಗೆ ಓಡಾಡುತ್ತಾರೆ. ಆದರೆ ಶೇಕಡಾ.15 ರಷ್ಟು ಬಸ್ ಪ್ರಯಾಣದರ ಹೆಚ್ಚಳ ಮಾಡುವುದರ ಮೂಲಕ ಆರ್ಥಿಕ ಹೊರೆಯನ್ನು ಜನಸಾಮಾನ್ಯರ ಮೇಲೆ ರಾಜ್ಯ ಸರ್ಕಾರ ಹಾಕುತ್ತಿದೆ.ಬಸ್‌ಗಳ ಸಂಖ್ಯೆ ಹೆಚ್ಚಿಸಿ – ಪ್ರಯಾಣ ದರವನಲ್ಲ.ಶಕ್ತಿ ಯೋಜನೆಯಿಂದಾಗಿ ದಿನನಿತ್ಯ ಬಸ್ಸಿನಲ್ಲಿ ಪ್ರಯಾಣ ಮಾಡುವ ಪ್ರಯಾಣಿಕರ ಸಂಖ್ಯೆ ಹೆಚ್ಚಾಗಿರುವುದು ಸರ್ಕಾರದ ಗಮನಕ್ಕೆ ಇದೆ, ಆದರೆ ಬಸ್ಗಳ ಸಂಖ್ಯೆಯನ್ನು ಹೆಚ್ಚಳ ಮಾಡದೆ ದಿನನಿತ್ಯ ಶಾಲಾ-ಕಾಲೇಜಿಗೆ ಹೋಗುವ ವಿದ್ಯಾರ್ಥಿಗಳಿಗೆ ತೊಂದರೆಯನ್ನುಂಟು ಮಾಡುತ್ತಿದೆ ವಿದ್ಯಾರ್ಥಿಗಳ ಶಾಲಾ- ಕಾಲೇಜಿಗೆ ಹೋಗುವ ಸಂದರ್ಭದಲ್ಲಿ ಹಲವಾರು ಬಸ್ಸುಗಳಲ್ಲಿ ಸ್ಥಳಾವಕಾಶ ಇಲ್ಲದೆ ಬಸ್ಗಳನ್ನ ನಿಲ್ಲಿಸಿದ ಪರಿಸ್ಥಿತಿ ನಿರ್ಮಾಣವಾಗುತ್ತಿದೆ. ಇದರಿಂದ ಸರಿಯಾದ ಸಮಯಕ್ಕೆ ವಿದ್ಯಾರ್ಥಿಗಳು ತರಗತಿಗಳಿಗೆ ಹಾಜರಾಗಲು ಆಗುತ್ತಿಲ್ಲ.
ಸರ್ಕಾರ ಕೂಡಲೇ ಬಸ್ಗಳ ಸಂಖ್ಯೆಯನ್ನು ಹೆಚ್ಚಳ ಮಾಡಿ ವಿದ್ಯಾರ್ಥಿಗಳ ಹಾಗೂ ಜನಸಾಮಾನ್ಯರ ಪ್ರಯಾಣಕ್ಕೆ ಅನುಕೂಲ ಮಾಡಬೇಕೆಂದು ಅಖಿಲ ಭಾರತೀಯ ವಿದ್ಯಾರ್ಥಿ ಪರಿಷತ್ ಬೀದರ ನಗರದ ವತಿಯಿಂದ ಮಾನ್ಯ ವಿಭಾಗ ನಿಯಂತ್ರಣ ಅಧಿಕಾರಿಗಳಿಗೆ ಮನವಿಯನ್ನು ಸಲ್ಲಿಸಲಾಯಿತು. ಈ ಸಮಯದಲ್ಲಿ ಅಖಿಲ ಭಾರತೀಯ ವಿದ್ಯಾರ್ಥಿ ಪರಿಷತ್ತಿನ ನಗರ ಕಾರ್ಯದರ್ಶಿ ಆನಂದ, ಸಹ ಕಾರ್ಯದರ್ಶಿ ನಾಗರಾಜ, ಪವನ್ ಕುಂಬಾರ ಲಿಂಗದೇವ ಗುತ್ತಿ,ಪ್ರಾರ್ಥನ, ಕಾವೇರಿ, ಸೋನಾಲ್ , ವಿದ್ಯಾರ್ಥಿಗಳು ಉಪಸ್ಥಿತರಿದ್ದರು.