ಅಂದು ರಾಜ್ಯದಲ್ಲಿ ಹಲವು ಕನ್ನಡ ವಾಹಿನಿಗಳಿದ್ದರೂ, ಯಾವೊಂದೂ ಕನ್ನಡಿಗರ ಮಾಲೀಕತ್ವದಲ್ಲಿ ಇರಲಿಲ್ಲ. ಪ್ರಾದೇಶಿಕ ಪಕ್ಷವೊಂದನ್ನು ಕನ್ನಡ ನೆಲದಲ್ಲಿ ಹುಟ್ಟು ಹಾಕಿದ, ದೇಶಕ್ಕೆ ಮೊದಲ ಕನ್ನಡಿಗ ಪ್ರಧಾನಿಯನ್ನು ನೀಡಿದ ಕುಟುಂಬದಿಂದ, ಮೊದಲ ಕನ್ನಡಿಗನ ಮಾಲೀಕತ್ವದ ವಾಹಿನಿಯೊಂದು ಶುರುವಾಗ್ತಿದೆ ಅಂದಾಗ ಅದು ‘ಕನ್ನಡ ಪತ್ರಿಕೋದ್ಯಮ’ದ ಪುಟಗಳಲ್ಲಿ ದಾಖಲಿಸಿಡುವಂತ ವಿಚಾರವಾಗಿತ್ತು. ಅದಕ್ಕೆ ಅನ್ವರ್ಥದಂತೆ ಇಟ್ಟ ಹೆಸರು ‘ಕಸ್ತೂರಿ’. ಮ್ಯೂಸಿಕ್ ಡೈರೆಕ್ಟರ್ ಗುರುಕಿರಣ್ ಸಂಯೋಜಿಸಿದ್ದ ಪ್ರೊಮೋ ಸಂಗೀತವೂ ಕನ್ನಡದ ಹಿರಿಮೆಗೆ ಇತ್ತಷ್ಟು ಇಂಬು ನೀಡುವಂತಿತ್ತು.
ಸುದ್ದಿ ಹಾಗೂ ಮನರಂಜನೆ
ಎರಡನ್ನೂ ಒಳಗೊಂಡ ವಾಹಿನಿ, ಶುರುವಾದ ಕೆಲ ತಿಂಗಳಲ್ಲೇ ನಂ.1 ಸ್ಥಾನಕ್ಕೇರಿದ್ದು ಈ ತಂಡದ ಎಲ್ಲರ ಪರಿಶ್ರಮಕ್ಕೆ ಸಿಕ್ಕ ಫಲ.
ಐದಂತಸ್ತಿನ ಕಟ್ಟಡದಲ್ಲಿ ಅದ್ಭುತವೆನ್ನಿಸುವಷ್ಟು ಒಳಾಂಗಣ ವಿನ್ಯಾಸ, ಸುದ್ದಿಯಲ್ಲಿ ಹೊಸತನ, ನವ ನವೀನ ಕಾರ್ಯಕ್ರಮಗಳು, ವಿಭಿನ್ನ ಬಗೆಯ ಪ್ರಯೋಗಗಳು ಕರ್ನಾಟಕದ ಜನ ಮೆಚ್ಚುಗೆಗೆ ಪಾತ್ರವಾಗಿತ್ತು.
ನಟ ರಮೇಶ್ ಅರವಿಂದ್ ರನ್ನ ಕಿರುತೆರೆಗೆ ಕರೆತಂದು ‘ಪ್ರೀತಿಯಿಂದ ರಮೇಶ್’ ಅನ್ನುವಂತ ದೊಡ್ಡ ಕಾರ್ಯಕ್ರಮ ಮಾಡಿಸಿದ ಹೆಗ್ಗಳಿಕೆ ಕಸ್ತೂರಿಗೇ ಸಲ್ಲಬೇಕು. ಇದರ ಕಾಪಿಯೇ ಇಂದಿನ ‘ವೀಕೆಂಡ್ ವಿತ್ ರಮೇಶ್’ ಕಾರ್ಯಕ್ರಮ ಎಂದರೂ ತಪ್ಪಾಗಲಾರದು. ಹಾಗೆಯೇ ನಟರಾದ ಕಾಶಿನಾಥ್, ಜಗ್ಗೇಶ್, ಅರುಣ್ ಸಾಗರ್ ಅವರಿಗೂ ಕಾರ್ಯಕ್ರಮಗಳಿಗಾಗಿ ದೊಡ್ಡ ವೇದಿಕೆ ಕಲ್ಪಿಸಿಕೊಡಲಾಗಿತ್ತು. ನಿರೂಪಕಿ ಅನು ಶ್ರೀ, ಬ್ರಹ್ಮಾಂಡ ಗುರೂಜಿ, ಇಂದು ಟಾಪ್ ಒನ್ ನಲ್ಲಿರುವ ಕೆಲವು ಹಾಸ್ಯ ನಟರು ಸೇರಿದಂತೆ, ಇನ್ನೂ ಅನೇಕರ ವೃತ್ತಿ ಜೀವನದ ಬೆಳವಣಿಗೆಗೂ ಕಸ್ತೂರಿ ಕಾರಣವಾಗಿತ್ತು. ಅಷ್ಟೇ ಅಲ್ಲ, ಅಂದು ಪ್ರಿಂಟ್ ಜರ್ನಲಿಸಂ ನಲ್ಲಿದ್ದ ಹಿರಿಯ ಪತ್ರಕರ್ತ ಪಬ್ಲಿಕ್ ಟಿ ವಿ ರಂಗನಾಥ್ ಸರ್ ರನ್ನ, ರಾಜಕೀಯ ಸುದ್ದಿ ವಿಶ್ಲೇಷಕರಾಗಿ ಎಲೆಕ್ಟ್ರಾನಿಕ್ ಮೀಡಿಯಾದಲ್ಲಿ ಮೊದಲು ಪರಿಚಯಿಸಿದ ಕೀರ್ತಿಯೂ ಕಸ್ತೂರಿಗೇ ಸಲ್ಲಬೇಕು.
ಇಂಥ ಚಾನಲ್ ಒಂದರನ್ನು ಕಟ್ಟುವುದರ ಹಿಂದಿದ್ದ ದೊಡ್ಡ ತಂಡದಲ್ಲಿ ನಮ್ಮ ಅಳಿಲು ಸೇವೆಯೂ ಇತ್ತು ಅನ್ನೋದು ಯಾವತ್ತಿಗೂ ಹೆಮ್ಮೆಯ ಸಂಗತಿ. ಅಲ್ಲಿ ದುಡಿಮೆ ಮಾತ್ರವಲ್ಲದೆ ನಮ್ಮ ನಡುವೆ ‘ಕಸ್ತೂರಿಗ’ ಎಂಬಂಥ ಒಂದು ಕುಟುಂಬದ ಬಾಂಧವ್ಯವನ್ನು ಹುಟ್ಟು ಹಾಕಿತ್ತು ಅನ್ನೋದಕ್ಕೆ ‘ಕಸ್ತೂರಿ ಪುನರ್ಮಿಲನ’ ಕಾರ್ಯಕ್ರಮದಲ್ಲಿ ಮತ್ತೆ ನಾವೆಲ್ಲರೂ ಒಂದಾಗಿದ್ದೆ ಸಾಕ್ಷಿ.
ಬೇಸರದ ಸಂಗತಿ ಎಂದರೆ ಆ ತಂಡದ ಅನೇಕರು ಇಂದು ದೈಹಿಕವಾಗಿ ನಮ್ಮೊಂದಿಗಿಲ್ಲ. ಇನ್ನೂ ಕೆಲವರು ವಿದೇಶ, ವೃತ್ತಿ, ವೈಯಕ್ತಿಕ ಕಾರಣಗಳಿಂದ ನಮ್ಮ ಜೊತೆಯಾಗಲಿಲ್ಲ. ಆದರೂ ಎಲ್ಲರನ್ನ ನೆನಸಿಕೊಳ್ಳುವುದನ್ನ ಮಾತ್ರ ಮರೆಯಲಿಲ್ಲ. ಇದಕ್ಕೂ ಮೀರಿ, ಎಲ್ಲಾ ಪತ್ರಕರ್ತರನ್ನು ಒಂದೆಡೆ ಸೇರಿಸುವಂತ ಸಾಹಸಕ್ಕೆ ಕೈ ಹಾಕಿದ ಅಯೋಜಕರಿಗೆ ಹ್ಯಾಟ್ಸಾಫ್. ಇದರ ರೂವಾರಿ, ಮಾಜಿ ಮುಖ್ಯಮಂತ್ರಿ ಹೆಚ್.ಡಿ.ಕೆ ಯವರ ಪ್ರೀತಿಯ ನುಡಿಗಳಿಗೆ ನಾವೆಲ್ಲರೂ ಆಭಾರಿಗಳು. ಕಸ್ತೂರಿ ವಾಹಿನಿ ಮರೆಯಾದರೂ ‘ಕಸ್ತೂರಿಗ’ ಎಂಬ ನಂಟು ಸದಾ ನಮ್ಮನ್ನ ಹೀಗೆ ಬೆಸೆಯುತ್ತಿರಲಿ.
ಲೇಖನ: ಡಾ.ವೈಶಾಲಿ ಹೊನ್ನಳ್ಳಿ
ಪತ್ರಿಕೋದ್ಯಮ ವಿಭಾಗದ ಮುಖ್ಯಸ್ಥರು
ನ್ಯಾಷನಲ್ ಕಾಲೇಜು ಬೆಂಗಳೂರು.