ಬ್ರೇಕಿಂಗ್ ನ್ಯೂಸ್ ಕ್ವಾರಂಟೈನ್ ವ್ಯಕ್ತಿ ಹೊರಗೆ ಬಂದರೆ ಪ್ರಕರಣ ದಾಖಲಿಸಲು ಬೆಳಗಾವಿ ಜಿಲ್ಲಾಧಿಕಾರಿ ಸೂಚನೆ 24/03/202024/03/20201 min read admin ಬೆಳಗಾವಿ: ಕೊರೊನಾ ತಡೆಗಟ್ಟುವ ಹಿನ್ನೆಲೆಯಲ್ಲಿ ಕ್ವಾರಂಟೈನ್ ಇರುವ ವ್ಯಕ್ತಿಗಳು ಸಾರ್ವಜನಿಕ ಸ್ಥಳಗಳಲ್ಲಿ ಕಂಡುಬಂದರೆ ತಕ್ಷಣ ಅವರ ವಿರುದ್ಧ ಪ್ರಕರಣ ದಾಖಲಿಸಬೇಕು ಮತ್ತು ಅವರ ಕುಟುಂಬದ ಸದಸ್ಯರಿಗೂ ಕಡ್ಡಾಯವಾಗಿ ಸ್ಟ್ಯಾಂಪಿಂಗ್ ಮಾಡಬೇಕು ಎಂದು ಜಿಲ್ಲಾಧಿಕಾರಿ ಡಾ.ಎಸ್.ಬಿ.ಬೊಮ್ಮನಹಳ್ಳಿ ಕಟ್ಟುನಿಟ್ಟಿನ ಸೂಚನೆ ನೀಡಿದ್ದಾರೆ. ಜಿಲ್ಲಾಧಿಕಾರಿ ಕಚೇರಿಯಲ್ಲಿ ಮಂಗಳವಾರ ಜಿಲ್ಲೆಯ ಎಲ್ಲ ತಾಲ್ಲೂಕಗಳ ಅಧಿಕಾರಿಗಳ ಜತೆ ನಡೆದ ವಿಡಿಯೋ ಸಂವಾದದಲ್ಲಿ ಮಾತನಾಡಿದರು. ಕ್ವಾರಂಟೈನ್ ಒಳಪಟ್ಟಿರುವ ವ್ಯಕ್ತಿಗಳು ಸಾರ್ವಜನಿಕ ಪ್ರದೇಶಗಳಲ್ಲಿ ಸಂಚರಿಸುತ್ತಿರುವ ಬಗ್ಗೆ ದೂರುಗಳು ಬರುತ್ತಿವೆ. ಅದೇ ರೀತಿ ಸ್ಟ್ಯಾಂಪಿಂಗ್ ಎಲ್ಲರಿಗೂ ಆಗಿಲ್ಲ ಎಂಬ ದೂರುಗಳಿದ್ದು, ಇಂದು ಸಂಜೆಯೊಳಗೆ ಕ್ವಾರಂಟೈನ್ ಇರುವರಿಗೆ ಕಡ್ಡಾಯವಾಗಿ ಸ್ಟ್ತಾಂಪಿಂಗ್ ಮಾಡಬೇಕು. ಕೊರೊನಾ ಹಿನ್ನೆಲೆಯಲ್ಲಿ ಕ್ವಾರಂಟೈನ್ ಇರುವ ವ್ಯಕ್ತಿಯ ಕುಟುಂಬದ ಎಲ್ಲ ಸದಸ್ಯರಿಗೂ ಕೂಡ ಸ್ಟ್ಯಾಂಪಿಂಗ್ ಮಾಡಬೇಕು ಎಂದು ಸರ್ಕಾರ ಸೂಚಿಸಿದೆ. ಆ ಪ್ರಕಾರ ತಕ್ಷಣವೇ ಕ್ರಮಕೈಗೊಳ್ಳಬೇಕು ಎಂದು ಜಿಲ್ಲಾಧಿಕಾರಿ ಸೂಚನೆ ನೀಡಿದರು. ಕ್ವಾರಂಟೈನ್ ಇರುವ ವ್ಯಕ್ತಿಗಳ ಮನೆಯ ಮೇಲೆ ನಿಗದಿತ ಮಾದರಿಯ ಎಚ್ಚರಿಕೆಯ ಪತ್ರವನ್ನು ಕೂಡ ಅವರ ಮನೆಯ ಮೇಲೆ ಅಂಟಿಸಬೇಕು. ಕ್ವಾರಂಟೈನ್ ಇರುವ ವ್ಯಕ್ತಿಯ ಮನೆಗೆ ಪೊಲೀಸ್ ಬೀಟ್ ಸಿಬ್ಬಂದಿ ಕಡ್ಡಾಯವಾಗಿ ದಿನಕ್ಕೆ ಎರಡು ಬಾರಿ ಭೇಟಿ ನೀಡಿ ಪರಿಶೀಲಿಸಬೇಕು. ಅಕ್ಕಪಕ್ಕದ ಮನೆಯವರ ದೂರವಾಣಿ ಸಂಖ್ಯೆ ಪಡೆದುಕೊಂಡು ನಿಗಾ ವಹಿಸಬೇಕು.ತಾಲ್ಲೂಕು, ಗ್ರಾಮ ಮತ್ತು ನಗರ ಸ್ಥಳೀಯ ಸಂಸ್ಥೆಗಳ ಮಟ್ಟದಲ್ಲಿ ಈ ರೀತಿಯ ಕಾರ್ಯವಿಧಾನ ಪಾಲಿಸಬೇಕು ಎಂದು ತಿಳಿಸಿದರು. ಆರೋಗ್ಯ ಇಲಾಖೆ ರಚಿಸಿರುವ ತಂಡಗಳು ಕ್ವಾರಂಟೈನ್ ವ್ಯಕ್ತಿ ಮತ್ತು ಕುಟುಂಬಗಳ ಸದಸ್ಯರ ಆರೋಗ್ಯದ ಬಗ್ಗೆ ನಿರಂತರವಾಗಿ ನಿಗಾ ವಹಿಸಬೇಕು. ಸಾಮೂಹಿಕ ಕ್ವಾರಂಟೈನ್ ಕಟ್ಟಡ ಗುರುತಿಸಲು ಸೂಚನೆ: ಕ್ವಾರಂಟೈನ್ ವ್ಯಕ್ತಿಗಳನ್ನು ಗ್ರಾಮ, ಅಪಾರ್ಟಮೆಂಟ್ ಮತ್ತಿತರ ಕಡೆಗಳಲ್ಲಿ ಇರಿಸಿಕೊಳ್ಳಲು ಜನರು ವಿರೋಧ ವ್ಯಕ್ತಪಡಿಸಿದರೆ ಅಂತಹ ವ್ಯಕ್ತಿಗಳ ಸಾಮೂಹಿಕ ಕ್ವಾರಂಟೈನ್ ಗಾಗಿ ಪ್ರತ್ಯೇಕ ಸ್ಥಳಗಳನ್ನು ಗುರುತಿಸುವಂತೆ ಸಂಬಂಧಿಸಿದ ಇಲಾಖೆಗಳಿಗೆ ಜಿಲ್ಲಾಧಿಕಾರಿ ಡಾ.ಬೊಮ್ಮನಹಳ್ಳಿ ನಿರ್ದೇಶನ ನೀಡಿದರು.ಇದರ ಜತೆಗೆ ಸಾಮೂಹಿಕ ಕ್ವಾರಂಟೈನ್ ಗೆ ಅನುಕೂಲ ವಾಗುವಂತೆ ಸರ್ಕಾರದ ಕಟ್ಟಡಗಳು, ಖಾಸಗಿ ಕಟ್ಟ ಮತ್ತು ಹೋಟೆಲ್ ಅಥವಾ ವಸತಿಗೃಹಗಳನ್ನು ಕೂಡ ಗುರುತಿಸಲು ತಿಳಿಸಿದರು.ರಜೆ ಇದ್ದಾಗ್ಯೂ ಯಾವುದೇ ಸಿಬ್ಬಂದಿ ಕೇಂದ್ರ ಸ್ಥಾನ ತೊರೆಯದಂತೆ ಜಿಲ್ಲಾಧಿಕಾರಿ ತಿಳಿಸಿದರು. ೧೪೫ ಉಲ್ಲಂಘಿಸಿದರೆ ಪ್ರಕರಣ ದಾಖಲಿಸಿ-ಎಸ್.ಪಿ. ಸೂಚನೆ: ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಲಕ್ಷ್ಮಣ ನಿಂಬರಗಿ ಮಾತನಾಡಿ, ಲಾಕ್ ಡೌನ್ ಹಾಗೂ ಕ್ವಾರಂಟೈನ್ ಗೆ ಸಂಬಂಧಿಸಿದಂತೆ ಸರ್ಕಾರ ನೀಡಿರುವ ಆದೇಶವನ್ನು ಚಾಚೂತಪ್ಪದೇ ಪಾಲಿಸಬೇಕು ಎಂದು ಸೂಚನೆ ನೀಡಿದರು.೧೪೪ ಕಲಂ ಉಲ್ಲಂಘಿಸುವ ಜನರ ವಿರುದ್ಧ ನಿರ್ದಾಕ್ಷಿಣ್ಯವಾಗಿ ಪ್ರಕರಣ ದಾಖಲಿಸಬೇಕು ಎಂದು ಸೂಚನೆ ನೀಡಿದರು.ಅತ್ಯಾವಶ್ಯಕ ಸೇವೆಗೆ ಸಂಬಂಧಿಸಿದಂತೆ ಸಾಮಾಜಿಕ ಅಂತರ ಕಾಯ್ದುಕೊಳ್ಳಲು ಕ್ರಮಕೈಗೊಳ್ಳಬೇಕು. ಮೆಡಿಕಲ್, ದಿನಸಿ ಅಂಗಡಿ, ಅಂಚೆ ಇಲಾಖೆ, ಮಾಧ್ಯಮ ಪ್ರತಿನಿಧಿ ಸೇರಿದಂತೆ ತುರ್ತು ಸೇವೆ ಸಲ್ಲಿಸಲು ಅಗತ್ಯವಿರುವ ಜನರಿಗೆ ಮಾತ್ರ ಅವಕಾಶ ಕಲ್ಪಿಸಲು ಪೊಲೀಸ್ ಸಿಬ್ಬಂದಿಗೆ ನಿರ್ದೇಶನ ನೀಡಿದರು. ಪೊಲೀಸ್ ಆಯುಕ್ತರಾದ ಬಿ.ಎಸ್.ಲೋಕೇಶ್ ಕುಮಾರ್, ಅಪರ ಜಿಲ್ಲಾಧಿಕಾರಿ ಅಶೋಕ ದುಡಗುಂಟಿ, ಮಹಾನಗರ ಪಾಲಿಕೆ ಆಯುಕ್ತರಾದ ಜಗದೀಶ್ ಕೆ.ಎಚ್., ಹೆಚ್ಚುವರಿ ಪೊಲೀಸ್ ವರಿಷ್ಠಾಧಿಕಾರಿ ಅಮರನಾಥ್ ರೆಡ್ಡಿ, ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣಾಧಿಕಾರಿ ಡಾ.ಎಸ್.ವಿ.ಮುನ್ಯಾಳ, ವಾರ್ತಾ ಮತ್ತು ಸಾರ್ವಜನಿಕ ಸಂಪರ್ಕ ಇಲಾಖೆಯ ಉಪ ನಿರ್ದೇಶಕ ಗುರುನಾಥ ಕಡಬೂರ ಸೇರಿದಂತೆ ವಿವಿಧ ಇಲಾಖೆಯ ಜಿಲ್ಲಾಮಟ್ಟದ ಅಧಿಕಾರಿಗಳು ಉಪಸ್ಥಿತರಿದ್ದರು. Share