9 ಸೆಕೆಂಡುಗಳಲ್ಲಿ ನಾಮಾವಶೇಷವಾದ ಎರಡು ಬೃಹತ್ ಕಟ್ಟಡಗಳು!

9 ಸೆಕೆಂಡುಗಳಲ್ಲಿ ನಾಮಾವಶೇಷವಾದ ಎರಡು ಬೃಹತ್ ಕಟ್ಟಡಗಳು!

ನೋಯ್ಡಾದ ಅವಳಿ ಟವರ್‌ ಗಳು

ಮುಖ್ಯಾಂಶಗಳು:

  • ನೋಯ್ಡಾದ ಅವಳಿ ಟವರ್‌ಗಳ ನೆಲಸಮ ಕಾರ್ಯಾಚರಣೆ
  • ಸಕ್ಸಸ್9 ಸೆಕೆಂಡುಗಳಲ್ಲಿ ನಾಮಾವಶೇಷವಾದ ಎರಡು ಬೃಹತ್ ಕಟ್ಟಡಗಳು
  • ಭಾರಿ ಸ್ಫೋಟದೊಂದಿಗೆ ಏಕಕಾಲಕ್ಕೆ ನೆಲಕಚ್ಚಿದ ಅವಳಿ ಕಟ್ಟಡಗಳು

ಕರ್ನಾಟಕ: ಮುರುಘಾ ಮಠಾಧೀಶರ ನಿರೀಕ್ಷಣಾ ಜಾಮೀನು ಅರ್ಜಿಯನ್ನು ನ್ಯಾಯಾಲಯ ಸೆ.1ಕ್ಕೆ ಮುಂದೂಡಿದೆ.

ಹೊಸದಿಲ್ಲಿ: ಭಾರಿ ಕುತೂಹಲ ಕೆರಳಿಸಿದ್ದ ನೋಯ್ಡಾದ ಅವಳಿ ಕಟ್ಟಡಗಳ ನೆಲಸಮ ಕಾರ್ಯಾಚರಣೆ ಭಾನುವಾರ ಸುಗಮವಾಗಿ ನಡೆದಿದೆ. 100 ಮೀಟರ್ ಎತ್ತರದ ಎರಡು ಬೃಹತ್ ಕಟ್ಟಡಗಳು 9 ಸೆಕೆಂಡುಗಳ ಒಳಗೆ ನೋಡ ನೋಡುತ್ತಿದ್ದಂತೆ ದೂಳಿನ ಅವಶೇಷವಾಗಿ ನಿರ್ನಾಮವಾಗಿದೆ. ಇದರೊಂದಿಗೆ ಕಟ್ಟಡ ನಿರ್ಮಾಣದಲ್ಲಿನ ಭ್ರಷ್ಟಾಚಾರಗಳು, ಅಕ್ರಮಗಳನ್ನು ನಡೆಸುವ ಕಂಪೆನಿಗಳು ಹಾಗೂ ಅಧಿಕಾರಿಗಳಿಗೆ ಸ್ಪಷ್ಟ ಸಂದೇಶ ರವಾನೆಯಾದಂತಾಗಿದೆ.

ಮೊದಲೇ ನಿಗದಿಪಡಿಸಿದ್ದಂತೆ ಭಾನುವಾರ ಮಧ್ಯಾಹ್ನ 2.30ಕ್ಕೆ ಅವಳಿ ಕಟ್ಟಡಗಳಲ್ಲಿನ ಅಂತಸ್ತುಗಳ ಪಿಲ್ಲರ್‌ಗಳ ಒಳಗೆ ಹುದುಗಿಸಲಾಗಿದ್ದ ಸ್ಫೋಟಕಗಳು ಒಮ್ಮೆಗೆ ಸ್ಫೋಟಿಸಿವೆ. ಇದರಿಂದ ಭಾರಿ ಪ್ರಮಾಣದ ದೂಳನ್ನು ಎಬ್ಬಿಸುತ್ತಾ ಎರಡೂ ಕಟ್ಟಡಗಳು ನೆಲಕ್ಕುರುಳಿವೆ.

ಎರಡೂ ಕಟ್ಟಡಗಳು ಏಕಕಾಲಕ್ಕೆ ಸ್ಫೋಟಗೊಂಡು, ನಿಂತ ಜಾಗದಲ್ಲಿಯೇ ಪುಡಿ ಪುಡಿಯಾಗಿ ಕುಸಿದು ಬಿದ್ದಿದೆ. ಈ ಮೂಲಕ ಕಾರ್ಯಾಚರಣೆಯ ಯೋಜನೆ ಯಶಸ್ವಿಯಾಗಿದೆ. ಕಟ್ಟಡಗಳು ಬೀಳುವಾಗ ವಾಲಿದ್ದರೆ ಅಕ್ಕಪಕ್ಕದ ಕಟ್ಟಡಗಳಿಗೆ ಭಾರಿ ಹಾನಿಯಾಗುವ ಅಪಾಯವಿತ್ತು.

ನೋಯ್ಡಾದ ಸೆಕ್ಟರ್ 93 ಬಿಯಲ್ಲಿನ ಕಟ್ಟಡಗಳ ನೆಲಸಮದಿಂದ ಸಿಮೆಂಟ್ ಮತ್ತು ಮಣ್ಣು ಮಿಶ್ರಿತ ದಟ್ಟವಾದ ದೂಳು ಹಲವು ಮೀಟರ್‌ಗಳವರೆಗೆ ಚಿಮ್ಮಿದೆ. ಇದರಿಂದ ಕಿಲೋಮೀಟರ್‌ಗಳವರೆಗೂ ದೂಳಿನ ಕಣಗಳು ಸಾಗಿರುವ ಸಾಧ್ಯತೆ ಇದೆ. ಈ ಕಾರ್ಯಾಚರಣೆಯಿಂದ ನೋಯ್ಡಾದಲ್ಲಿ ವಾಯುಮಾಲಿನ್ಯವು ಅಪಾಯಕಾರಿ ಮಟ್ಟಕ್ಕೆ ತಲುಪಲಿದೆ ಎಂದು ಹವಾಮಾನ ತಜ್ಞರು ಹೇಳಿದ್ದಾರೆ. ನೋಯ್ಡಾದ ಸೆಕ್ಟರ್ 126, 137, 26, 93B, 91 ವಲಯಗಳಿಗೆ ದೂಳಿನಿಂದ ಹಾನಿ ಉಂಟಾಗಲಿದೆ.

ಸ್ಫೋಟದ ತೀವ್ರತೆಗೆ ಹಲವು ಮೀಟರ್‌ಗಳಷ್ಟು ದೂರವರೆಗೂ ನೆಲ ಕಂಪಿಸಿದೆ. ಅಕ್ಕಪಕ್ಕದ ಕಟ್ಟಡಗಳಿಗೆ ಹಾನಿ ಉಂಟಾಗದಂತೆ ಸೂಕ್ತ ಮುಂಜಾಗ್ರತೆ ಕ್ರಮ ಕೈಗೊಳ್ಳಲಾಗಿತ್ತು. ಆದರೆ, ಯಾವ ಕಟ್ಟಡಕ್ಕಾದರೂ ಹಾನಿಯಾಗಿದೆಯೇ ಎಂಬ ಬಗ್ಗೆ ಸಂಜೆ ಬಳಿಕ ಮಾಹಿತಿ ಸಿಗುವ ಸಾಧ್ಯತೆ ಇದೆ.

ಕಟ್ಟಡ ಉರುಳಿಸಿದ ಬಳಿಕ ನೋಯ್ಡಾ ಅಧಿಕಾರಿಗಳಿಗೆ ಅದರ ಅವಶೇಷಗಳನ್ನು ತೆರವುಗೊಳಿಸುವುದು ಮುಂದೆ ಇರುವ ಸವಾಲಾಗಿದೆ. ಬೆಟ್ಟದಷ್ಟು ಪ್ರಮಾಣದ ಸಿಮೆಂಟ್, ಕಲ್ಲು, ಕಬ್ಬಿಣದ ಸುಮಾರು 55,000 ಟನ್ ಅವಶೇಷ ಉಂಟಾಗಲಿದೆ ಎಂದು ಊಹಿಸಲಾಗಿದೆ. ಇವುಗಳನ್ನು ತೆರವುಗೊಳಿಸಲು ಕನಿಷ್ಠ ಮೂರು ತಿಂಗಳು ಬೇಕಾಗಲಿದೆ.

Share
WhatsApp
Follow by Email