ಹಾಲ್ ಆಫ್ ದ ಫೇಮ್‍ನಲ್ಲಿ ಅನಿಲ್​ ಕುಂಬ್ಳೆ ಸಾಧನೆಗಳ ಸಂಭ್ರಮಾಚರಣೆ

ಹಾಲ್ ಆಫ್ ದ ಫೇಮ್‍ನಲ್ಲಿ ಅನಿಲ್​ ಕುಂಬ್ಳೆ ಸಾಧನೆಗಳ ಸಂಭ್ರಮಾಚರಣೆ

ಐಸಿಸಿ ತನ್ನ ವೆಬ್‍ಸೈಟ್‍ನಲ್ಲಿ ಪೋಸ್ಟ್ ಮಾಡಿರುವ ವಿಡಿಯೋವೊಂದರಲ್ಲಿ, ಶ್ರೀಲಂಕಾ ಕ್ರಿಕೆಟ್ ತಂಡದ ಮಾಜಿ ನಾಯಕ, ಕುಮಾರ್ ಸಂಗಕ್ಕಾರ, ತಾನು ಅನಿಲ್ ಕುಂಬ್ಳೆ ಅವರ ಜೊತೆ ಕ್ರಿಕೆಟ್ ಆಡಿದ್ದ ದಿನಗಳ ಕೆಲವು ಕ್ಷಣಗಳನ್ನ ಹಂಚಿಕೊಂಡಿದ್ದಾರೆ.

ಭಾರತ ಕ್ರಿಕೆಟ್ ತಂಡದ ಮಾಜಿ ನಾಯಕ ಮತ್ತು ಲೆಗ್ ಸ್ಪಿನ್ನರ್ ಅನಿಲ್ ಕುಂಬ್ಳೆ ಅವರು ಭಾರತ ಕ್ರಿಕೇಟ್ ತಂಡದಲ್ಲಿ ಮಾಡಿರುವ ಅಪೂರ್ವ ಸಾಧನೆಗಾಗಿ ಅವರನ್ನು, ಅಂತರಾಷ್ಟ್ರೀಯ ಕ್ರಿಕೆಟ್ ಕೌನ್ಸಿಲ್ ಐಸಿಸಿ ಹಾಲ್ ಆಫ್ ಫೇಮ್‍ಗೆ ಸೇರಿಸಿಕೊಂಡಿದೆ. ಇತರ ದೇಶಗಳ ಅತ್ಯುತ್ತಮ ಆಟಗಾರರ ಸಾಧನೆಗಳನ್ನು ಆಚರಿಸಿದ ಬಳಿಕ, ಐಸಿಸಿಯು ಅನಿಲ್ ಕುಂಬ್ಳೆಯವರು ಕ್ರಿಕೆಟ್‌ನಲ್ಲಿ ಮಾಡಿರುವ ಅದ್ಭುತ ದಾಖಲೆಗಳನ್ನು ಮತ್ತೆ ನೆನಪಿಸಿಕೊಳ್ಳುವಂತೆ ಮಾಡಿದೆ. ಅನಿಲ್ ಕುಂಬ್ಳೆ ಅವರನ್ನು, “ಸಾರ್ವಕಾಲಿಕ ಅತಿ ಶ್ರೇಷ್ಟ ಬೌಲರ್‌ಗಳಲ್ಲಿ ಒಬ್ಬರು” ಎಂದು ಕರೆದಿರುವ ಐಸಿಸಿ, ಅವರು ಕ್ರಿಕೆಟ್‍ನಲ್ಲಿ ಮಾಡಿರುವ ಎಲ್ಲಾ ಸಾಧನೆಗಳ ಪಟ್ಟಿಯನ್ನು ತನ್ನ ಅಧಿಕೃತ ಇನ್‍ಸ್ಟಾಗ್ರಾಂ ಖಾತೆಯಲ್ಲಿ ಪ್ರಕಟಿಸಿದ್ದು, ಅವರು ಇಂದಿಗೂ “ಟೆಸ್ಟ್ ಕ್ರಿಕೆಟ್‍ನಲ್ಲಿ ಮೊದಲ ಮೂರನೇ ಸ್ಥಾನದಲ್ಲಿರುವ ವಿಕೆಟ್ ಟೇಕರ್” ಎಂದು ಹೇಳಿದೆ.

ಐಸಿಸಿ ತನ್ನ ವೆಬ್‍ಸೈಟ್‍ನಲ್ಲಿ ಪೋಸ್ಟ್ ಮಾಡಿರುವ ವಿಡಿಯೋವೊಂದರಲ್ಲಿ, ಶ್ರೀಲಂಕಾ ಕ್ರಿಕೆಟ್ ತಂಡದ ಮಾಜಿ ನಾಯಕ, ಕುಮಾರ್ ಸಂಗಕ್ಕಾರ, ತಾನು ಅನಿಲ್ ಕುಂಬ್ಳೆ ಅವರ ಜೊತೆ ಕ್ರಿಕೆಟ್ ಆಡಿದ್ದ ದಿನಗಳ ಕೆಲವು ಕ್ಷಣಗಳನ್ನ ಹಂಚಿಕೊಂಡಿದ್ದಾರೆ. ಸಂಗಕ್ಕಾರ ವಿಡಿಯೋದಲ್ಲಿ ಕುಂಬ್ಳೆಯವರ ಆಟದ ಬಗ್ಗೆ ಮಾತನಾಡುತ್ತಾ, “ಒಬ್ಬ ಕಠಿಣ ಪ್ರತಿಸ್ಪರ್ಧಿ” ಎಂದು ಹೊಗಳಿದ್ದಾರೆ.

“ಕುಂಬ್ಳೆಯ ಕ್ರಿಕೆಟ್ ಚಾತುರ್ಯದ ದೆಸೆಯಿಂದ ನಾನು ಕೆಲವು ನಿದ್ದೆಯಿಲ್ಲದ ರಾತ್ರಿಗಳನ್ನು ಕಳೆದಿದ್ದೇನೆ” ಎಂದು ಅವರು ಹೇಳಿದ್ದಾರೆ.

ಕುಮಾರ್ ಸಂಗಕ್ಕಾರ ಅವರ ಪ್ರಕಾರ ಕುಂಬ್ಳೆ ಒಬ್ಬ ಸಾಂಪ್ರದಾಯಿಕ ಲೆಗ್ ಸ್ಪಿನ್ನರ್ ಅಲ್ಲ. “ ಈ ದೊಡ್ಡ, ಎತ್ತರದ ಅಜಾನುಬಾಹು ಬೌಲರ್, ವೇಗವಾಗಿ ಓಡಿಬಂದು ಬೌಲಿಂಗ್ ಮಾಡುವ ಪರಿಗೆ ಅವರನ್ನು ರನ್‍ಗಳಿಂದ ಅಷ್ಟು ಸುಲಭವಾಗಿ ದೂರವಿಡುವುದು ಸಾಧ್ಯವಿಲ್ಲ” ಎನ್ನುತ್ತಾರೆ ಸಂಗಕ್ಕಾರ.

ಭಾರತಕ್ಕಾಗಿ 132 ಟೆಸ್ಟ್ ಪಂದ್ಯಗಳನ್ನು ಆಡಿರುವ ಕುಂಬ್ಳೆ, 35 ಐದು-ವಿಕೆಟ್ ಗಳಿಕೆ ಸೇರಿದಂತೆ, 619 ವಿಕೆಟ್‍ಗಳನ್ನು ಕಬಳಿಸಿದ್ದಾರೆ. ಅವರು 271 ಏಕದಿನ ಅಂತರಾಷ್ಟ್ರೀಯ ಪಂದ್ಯಗಳಲ್ಲಿ, ಸರಾಸರಿ 30.89ರಂತೆ 337 ವಿಕೆಟ್‍ಗಳನ್ನು ಪಡೆದಿದ್ದಾರೆ. ಟೆಸ್ಟ್ ಪಂದ್ಯಗಳಲ್ಲಿ, ಸಾರ್ವಕಾಲಿಕ ಅತೀ ಹೆಚ್ಚು ವಿಕೆಟ್‍ಗಳನ್ನು ಪಡೆದ ಆಟಗಾರರ ಪಟ್ಟಿಯಲ್ಲಿ, ಅನಿಲ್ ಕುಂಬ್ಳೆ ಇಂದಿಗೂ ತಮ್ಮ ಮೂರನೇ ಸ್ಥಾನವನ್ನು ಉಳಿಸಿಕೊಂಡಿದ್ದಾರೆ. ಈ ಪಟ್ಟಿಯ ಮೊದಲೆರಡು ಸ್ಥಾನದಲ್ಲಿ ಶ್ರೀಲಂಕಾದ ಆಟಗಾರ ಮುತ್ತಯ್ಯ ಮುರಳೀಧರನ್ ಮತ್ತು ಆಸ್ಟ್ರೇಲಿಯಾದ ಶೇನ್ ವಾರ್ನ್‌ ಇದ್ದಾರೆ.

ತಮ್ಮ ಕ್ರಿಕೆಟ್ ವೃತ್ತಿ ಜೀವನದಲ್ಲಿ, ಅಭೂತಪೂರ್ವ ಸಾಧನೆಯನ್ನು ಮಾಡಿದ ಕ್ರಿಕೆಟಿಗರ ಸಾಧನೆಯ ಸಂಭ್ರಮವನ್ನು ಆಚರಿಸುವ ಉದ್ದೇಶದಿಂದ, ಐಸಿಸಿ ತನ್ನ ಇನ್‍ಸ್ಟಾಗ್ರಾಂ ಖಾತೆಯಲ್ಲಿ ಹಾಲ್ ಆಫ್ ದ ಫೇಮ್ ತಿಂಗಳನ್ನು ಆರಂಭಿಸಿದೆ. ನ್ಯೂಜಿಲೆಂಟ್ ಕ್ರಿಕೆಟ್ ತಂಡದ ಆಟಗಾರ, ಮಾರ್ಟಿನ್ ಕ್ರೋವ್ ಅವರ ಸಾಧನೆಗಳ ಸಂಭ್ರಮವನ್ನು ಆಚರಿಸುವ ಮೂಲಕ ಹಾಲ್ ಆಫ್ ದ ಫೇಮ್ ಮೊದಲ ಹೆಜ್ಜೆ ಇಟ್ಟಿತು. ಮಾಜಿ ಆಸ್ಟ್ರೇಲಿಯದ ಕ್ರಿಕೆಟಿಗ ಕೀತ್ ಮಿಲ್ಲರ್, ಮಾಜಿ ವೆಸ್ಟ್ ಇಂಡೀಸ್ ಆಟಗಾರ ವಿವಿಯನ್ ರಿಚರ್ಡ್ಸ್‌ ಮತ್ತು ಇಂಗ್ಲೆಂಡ್ ತಂಡದ ಮಾಜಿ ಆಟಗಾರ ಕ್ಲಾರಿ ಟೇಲರ್ ಮುಂತಾದವರ ಸಾಧನೆಯ ಸಂಭ್ರಮಾಚರಣೆಯನ್ನು ಹಾಲ್ ಆಫ್ ದ ಫೇಮ್ ತಿಂಗಳಲ್ಲಿ ಮಾಡಲಾಗಿದೆ.

Share
WhatsApp
Follow by Email