ಸಿದ್ದರಾಮಯ್ಯನವರ ಹಿಂದಿನ ತಂತ್ರಗಾರಿಕೆಯನ್ನು ಅವರಿಗೇ ತಿರುಗಿಸಿಬಿಟ್ಟ ಬಿಎಸ್ವೈ
ಬೆಂಗಳೂರು: ಈ ಹಿಂದೆ ತಾವು ಮುಖ್ಯಮಂತ್ರಿಯಾಗಿದ್ದ ವೇಳೆ ಹೂಡಿದಂತಹ ತಂತ್ರಗಾರಿಕೆ, ವಿರೋಧ ಪಕ್ಷದ ಸಿದ್ದರಾಮಯ್ಯನವರಿಗೆ ತಿರುಗುಬಾಣವಾಗಿದೆ. ಸಿದ್ದರಾಮಯ್ಯನವರು ಜಿಲ್ಲಾಧಿಕಾರಿಗಳ ಜೊತೆ ಸಂವಾದ ನಡೆಸಲು ಮುಂದಾಗಿದ್ದರು. ಇದೇ ತಿಂಗಳ 21-25ರವರೆಗೆ ರಾಜ್ಯದ ಎಲ್ಲಾ ಜಿಲ್ಲಾಧಿಕಾರಿಗಳು, ಜಿಲ್ಲಾಪಂಚಾಯತಿ ಸಿಇಓ, ನಗರಪಾಲಿಕೆ ಆಯುಕ್ತರು, ಪೊಲೀಸ್ ವರಿಷ್ಠರ ಜೊತೆ ವಿಡಿಯೋ ಸಂವಾದ ನಡೆಸಲು ಸಿದ್ದರಾಮಯ್ಯನವರು ಸಿದ್ದತೆ ನಡೆಸಿದ್ದರು.
ಈ ಕುರಿತಂತೆ ಮುಖ್ಯ ಕಾರ್ಯದರ್ಶಿಗಳಿಗೆ (ಸಿಎಸ್) ಪತ್ರವನ್ನು ಬರೆದು, ಸಭೆಯ ವೇಳೆ ಇರಬೇಕಾದ ಮಾಹಿತಿಯನ್ನೂ ಲಗತ್ತಿಸಿ, ಸೂಕ್ತ ಆದೇಶ ನೀಡುವಂತೆ ಸಿದ್ದರಾಮಯ್ಯ ಕೋರಿದ್ದರು. ಸಿದ್ದರಾಮಯ್ಯನವರ ಪತ್ರಕ್ಕೆ ಸಿಎಸ್ ಪತ್ರ ಬರೆದಿದ್ದು ಈ ರೀತಿಯ ಸಭೆ ನಡೆಸಲು ಅವಕಾಶವಿಲ್ಲ ಎಂದಿದ್ದಾರೆ.
ವಿರೋಧ ಪಕ್ಷದ ನಾಯಕರು ಸರಕಾರದ ಭಾಗವಾಗಿ ಇರುವುದಿಲ್ಲ, ಮತ್ತು, ಸಚಿವರುಗಳಿಗೆ ಇರುವ ಆಡಾಳಿತಾತ್ಮಕ ಅಧಿಕಾರ ಇರುವುದಿಲ್ಲ. ಹಾಗಾಗಿ, ಅವರಿಗೆ ಬೇಕಾಗಿರುವ ಮಾಹಿತಿಯನ್ನು ಪತ್ರದ ಮೂಲಕ ಪಡೆಯುವ ಅವಕಾಶವಿದೆ ಎಂದು ಮುಖ್ಯ ಕಾರ್ಯದರ್ಶಿಗಳು ತಮ್ಮ ಪತ್ರದಲ್ಲಿ ಉಲ್ಲೇಖಿಸಿದ್ದಾರೆ. ಏಪ್ರಿಲ್, ಜೂನ್ 2009ರಲ್ಲಿ ಸರಕಾರ ಸುತ್ತೋಲೆಯೊಂದನ್ನು ಹೊರಡಿಸಿ, ವಿರೋಧ ಪಕ್ಷದ ನಾಯಕರುಗಳಿಗೆ ಸರಕಾರೀ ಅಧಿಕಾರಿಗಳ ಜೊತೆ ನೇರ ಸಭೆ ನಡೆಸಲು ಅವಕಾಶವಿಲ್ಲ ಎನ್ನುವ ಆದೇಶವನ್ನು ಹೊರಡಿಸಲಾಗಿತ್ತು. ಆ ವೇಳೆ, ಯಡಿಯೂರಪ್ಪನವರು ಮುಖ್ಯಮಂತ್ರಿಗಳಾಗಿದ್ದರು. ಇದಾದ ನಂತರ, ಆ ಸುತ್ತೋಲೆಯನ್ನು ಕಟ್ಟುನಿಟ್ಟಾಗಿ ಪಾಲಿಸುವಂತೆ ಏಪ್ರಿಲ್ 2016ರಲ್ಲಿ ಎಲ್ಲಾ ಇಲಾಖೆಯ ಮುಖ್ಯಸ್ಥರಿಗೆ ಸೂಚಿಸಲಾಗಿತ್ತು. ಆ ವೇಳೆ, ಸಿದ್ದರಾಮಯ್ಯನವರು ಮುಖ್ಯಮಂತ್ರಿಯಾಗಿದ್ದರು. ಈಗ, ಬಿಎಸ್ವೈ ಸರಕಾರ ಅದನ್ನೇ ಸಿದ್ದರಾಮಯ್ಯನವರಿಗೆ ತಿರುಗುಬಾಣವಾಗಿ ಬಿಟ್ಟಿದೆ.
ಸಿದ್ದರಾಮಯ್ಯ ಪ್ರತಿಕ್ರಿಯೆ: “ದಿನಕ್ಕೆ ಆರು ಜಿಲ್ಲೆಗಳಂತೆ ಐದು ದಿನ ಸಭೆ ನಡೆಸಲು ಮುಂದಾಗಿದ್ದೆ. ವಿರೋಧ ಪಕ್ಷದ ನಾಯಕರು ಸಭೆ ನಡೆಸುವಂತಿಲ್ಲ ಎಂದಿದ್ದಾರೆ. ತಮ್ಮ ಸರಕಾರದ ಹುಳುಕನ್ನು ಮುಚ್ಚಿಕೊಳ್ಳಲು ಈ ರೀತಿ ಮಾಡಿದ್ದಾರೆ” ಎಂದು ಸಿದ್ದರಾಮಯ್ಯ ಪ್ರತಿಕ್ರಿಯಿಸಿದ್ದಾರೆ.