ಅಣ್ಣಮ್ಮ ದೇವಿಯ ಆಶೀರ್ವಾದಿಂದ ಕೊರೊನಾ ಕಡಿಮೆಯಾಗಲಿದೆ: ತಾಯಿಗೆ ವಿಶೇಷ ಪೂಜೆ ಸಲ್ಲಿಸಿದ ಬಿಎಸ್‌ವೈ.

ಬೆಂಗಳೂರು: ರಾಜ್ಯದಲ್ಲಿ ಕೋವಿಡ್‌ ನಿಯಂತ್ರಣ ಮೀರಿ ಹರಡುತ್ತಿದೆ. ಬೆಡ್‌, ಲಸಿಕೆ, ಆಕ್ಸಿಜನ್ ಕೊರತೆಯಿಂದ ಜನರು ಕಂಗಾಲಾಗಿದ್ದಾರೆ. ಇಂತಹ ಸಂದರ್ಭದಲ್ಲಿ ಸಿಎಂ ಬಿಎಸ್‌ ಯಡಿಯೂರಪ್ಪ ಅವರು ಅಣ್ಣಮ ದೇವಿಯ ಮೊರೆ ಹೋಗಿದ್ದಾರೆ. ಬೆಂಗಳೂರಿನ ಮೆಜೆಸ್ಟಿಕ್ ಬಳಿ ಇರುವ ಅಣ್ಣಮ್ಮ ದೇವಸ್ಥಾನಕ್ಕೆ ಭೇಟಿ ನೀಡಿ ವಿಶೇಷ ಪೂಜೆ ಸಲ್ಲಿಸಿದರು.ಪೂಜೆ ಹಾಗೂ ದರ್ಶನದ ಬಳಿಕ ಮಾಧ್ಯಮಗಳ ಜೊತೆಗೆ ಮಾತನಾಡಿದ ಅವರು, ದೇಶ ಹಾಗೂ ರಾಜ್ಯದಲ್ಲಿ ಕೊರೊನಾ ಕಾಡುತ್ತಿದೆ ಇದರಿಂದ ಹೊರಬರಲು ನೆಮ್ಮದಿಯಿಂದ ಬದುಕಲು ಒಳ್ಳೆಯ ಕಾಲ ಕೊಡು ಎಂದು ಅಣ್ಣಮ್ಮ ದೇವಿಯಲ್ಲಿ ಬೇಡಿಕೊಂಡಿದ್ದೇನೆ. ಖಂಡಿತಾ ಅಣ್ಣಮ್ಮ ದೇವಿಯ ಆಶೀರ್ವಾದಿಂದ ಕೊರೊನಾ ಕಡಿಮೆಯಾಗಿ ಜನರು ನೆಮ್ಮದಿಯಿಂದ ಬದುಕುವ ಕಾಲ ಬರುತ್ತದೆ ಎಂಬ ವಿಶ್ವಾಸ ಇದೆ ಎಂದರು.

Samsung Galaxy M31 (Ocean Blue, 6GB RAM, 128GB Storage)

ಸಂಸದ ತೇಜಸ್ವಿಸೂರ್ಯ ರಿಸ್ಕ್ ತೆಗೆದುಕೊಂಡು ಬೆಡ್‌ ಬ್ಲಾಕ್‌ ದಂಧೆಯ ಬಗ್ಗೆ ಸರ್ಕಾರದ ಗಮನಕ್ಕೆ ತಂದರು. ಈ ಬಗ್ಗೆ ವಿಧಾನಸೌಧದಲ್ಲಿ ಅವರ ಜೊತೆಗೆ ಮಾತನಾಡಿ ಬಿಗಿ ಕ್ರಮ ಕೈಗೊಂಡಿದ್ದೇನೆ. ತೇಜಸ್ವಿ ಒಳ್ಳೆಯ ಕೆಲಸಕ್ಕೆ ಸರ್ಕಾರದ ಪರವಾಗಿ ಅಭಿನಂದನೆ ಸಲ್ಲಿಸುತ್ತೇನೆ. ವಾಸ್ತವ ಸಂಗತಿಯನ್ನು ಬಯಲಿಗೆಳೆದಿದ್ದಾರೆ. ಜಮೀರ್ ಅಹಮ್ಮದ್ ತೇಜಸ್ವಿ ಸೂರ್ಯ ಬಗ್ಗೆ ಹಗುರವಾಗಿ ಮಾತನಾಡುವುದನ್ನು ನಿಲ್ಲಿಸಬೇಕು ಎಂದು ಆಗ್ರಹಿಸಿದರು.

ಇನ್ನು ಕೋವಿಡ್‌ ನಿಯಂತ್ರಣ ಮಾಡುವ ನಿಟ್ಟಿನಲ್ಲಿ ಕಠಿಣ ನಿಯಮಗಳ ಬಗ್ಗೆ ನಾಳೆ ಕುಳಿತುಕೊಂಡು ಚರ್ಚೆ, ಬಿಗಿಯಾದ ಕ್ರಮ ಅನಿವಾರ್ಯ ಆಗಿದೆ. ಈ ಬಗ್ಗೆ ಚರ್ಚೆ ನಡೆಸಿ ಸೂಕ್ತ ಕ್ರಮ ಕೈಗೊಳ್ಳುತ್ತೇನೆ. ಜನರು ಸೂಕ್ತವಾಗಿ ನಿಯಮ ಪಾಲನೆ ಮಾಡಬೇಕು. ಇಲ್ಲಾಂದ್ರೆ ಲಾಕ್‌ಡೌನ್ ಅನಿವಾರ್ಯ ಆಗಬಹುದು ಎಂದರು.ಇದೇ ಸಂದರ್ಭದಲ್ಲಿ, ಕೋವಿಡ್ ಚಿಕಿತ್ಸೆ ಕೊಡಿಸಿ ಎಂದು ಜನರು ವಿಧಾನಸೌಧಕ್ಕೆ ಬಂದು ಪ್ರತಿಭಟನೆ ಮಾಡುವುದು ಸರಿಯಲ್ಲ, ಬದಲಾಗಿ ಅಧಿಕಾರಿಗಳ ಗಮನಕ್ಕೆ ತಂದರೆ ಸೂಕ್ತ ಕ್ರಮ ಕೈಗೊಳ್ಳುತ್ತೇವೆ ಎಂದು ಮನವಿ ಮಾಡಿಕೊಂಡರು.

ಸಮುದ್ರ ಸೇತು ಯೋಜನೆ: ಬಹರೈನ್​​ನಿಂದ ಮಂಗಳೂರಿಗೆ ಬಂದಿಳಿದ 50 ಮೆಟ್ರಿಕ್ ಟನ್ ಆಕ್ಸಿಜನ್.

ಸಾಂದರ್ಭಿಕ ಚಿತ್ರ

ಮಂಗಳೂರು: ಕೊರೋನಾ 2ನೇ ಅಲೆಯಿಂದ ದೇಶ ತತ್ತರಿಸುತ್ತಿದೆ. ಆಕ್ಸಿಜನ್​ಗಾಗಿ ಎಲ್ಲೆಡೆ ಹಾಹಾಕಾರವಿದೆ. ಆಕ್ಸಿಜನ್​ ಕೊರತೆ ನೀಗಿಸಲು ಕೇಂದ್ರ ಸರ್ಕಾರ ಹರಸಾಹಸಪಡುತ್ತಿದೆ. ಈ ನಿಟ್ಟಿನಲ್ಲಿ ಕೇಂದ್ರ ಸರ್ಕಾರದಿಂದ ಸಮುದ್ರ ಸೇತು-2 ಕಾರ್ಯಾಚರಣೆ ನಡೆಯುತ್ತಿದೆ. ಇದರ ಅಂಗವಾಗಿ ಭಾರತದ ನೌಕಾಸೇನಾ ಹಡಗು ಐಎನ್‌ಎಸ್ ತಲ್ವಾರ್, 50 ಮೆಟ್ರಿಕ್ ಟನ್‌ ಆಮ್ಲಜನಕವನ್ನು ಮಂಗಳೂರು ಬಂದರಿಗೆ ತರಲಾಗಿದೆ. ಕೇಂದ್ರ ಸರ್ಕಾರ ಆಮ್ಲಜನಕದ ಟ್ಯಾಂಕರ್ ನ್ನು ಉಚಿತವಾಗಿ ನಿರ್ವಹಣೆ ಮಾಡುವಂತೆ ನವಮಂಗಳೂರು ಬಂದರಿಗೆ ಸೂಚನೆ ನೀಡಿತ್ತು.

ಬಹರೈನ್‌ನ ಮನಾಮಾದಿಂದ ಎರಡು ಕ್ರಯೋಜೆನಿಕ್ ಐಸೋ ಕಂಟೈನರ್‌ಗಳಲ್ಲಿ 50 ಮೆಟ್ರಿಕ್ ಟನ್ ಆಕ್ಸಿಜನ್ ಬಂದಿಳಿದಿದೆ. ಆಕ್ಸಿಜನ್ ಜೊತೆಗೆ ಕೋವಿಡ್ ಚಿಕಿತ್ಸೆಗೆ ಅಗತ್ಯವಿರುವ ಮೆಡಿಕಲ್ ಉಪಕರಣಗಳೂ ಬಂದಿವೆ. ನವಮಂಗಳೂರು ಬಂದರಿಗೆ ಈ 50 ಮೆಟ್ರಿಕ್ ಟನ್ ಆಕ್ಸಿಜನ್ ಬಂದಿಳಿಯಲಿದೆ. ವಿದೇಶಗಳಿಂದ ಆಕ್ಸಿಜನ್​ ತರುವ ಉದ್ದೇಶದಿಂದ ಭಾರತೀಯ ನೌಕಾಪಡೆ ಆಪರೇಷನ್​ ಸಮುದ್ರ ಸೇತು 2 ಕಾರ್ಯಾಚರಣೆ ಆರಂಭಿಸಿದೆ. ಏಳು ಭಾರತೀಯ ನೌಕಾ ಹಡಗುಗಳಾದ ಕೋಲ್ಕತ್ತಾ, ಕೊಚ್ಚಿ, ತಲ್ವಾರ್​, ತಬಾರ್​, ತ್ರಿಕಾಂಡ್​, ಜಲಶ್ವಾ ಮತ್ತು ಐರಾವತ್​ ಈ ಕಾರ್ಯಾಚರಣೆಗೆ ನಿಯೋಜನೆಗೊಂಡಿವೆ.

ಮೊದಲ ಹಂತದಲ್ಲಿ ಬಹರೈನ್​, ಸಿಂಗಾಪುರ ಮತ್ತು ಥಾಯ್ಲೆಂಡ್​ಗಳಿಂದ ಆಮ್ಲಜನಕ ತರಲು ಯೋಜನೆ ರೂಪಿಸಲಾಗಿದೆ. ದೇಶದಲ್ಲಿ ಉಂಟಾಗಿರುವ ಆಮ್ಲಜನಕ ಸಮಸ್ಯೆ ಸರಿದೂಗಿಸುವ ಉದ್ದೇಶದಿಂದ ಆಪರೇಷನ್​ ಸಮುದ್ರ ಸೇತು-2 ಯೋಜನೆ ಹಮ್ಮಿಕೊಳ್ಳಲಾಗಿದೆ.

ಇನ್ನು ರಾಜ್ಯದಲ್ಲಿ ಆಕ್ಸಿಜನ್​ ಸಮಸ್ಯೆ ಸೇರಿದಂತೆ ಕೋವಿಡ್​ ನಿರ್ವಹಣೆಗೆ ಸಿಎಂ ಸಚಿವರಿಗೆ ಉಸ್ತುವಾರಿ ವಹಿಸಿದ್ದು, ಈ ಬಗ್ಗೆ ಕ್ರಿಯಾಶೀಲರಾಗಿ ಕಾರ್ಯ ನಿರ್ವಹಿಸುವಂತೆ ಸೂಚಿಸಿದ್ದಾರೆ. ಈ ಬೆನ್ನಲ್ಲೆ ಇಂದು ಆಕ್ಸಿಜನ್​ ಸಮಸ್ಯೆ ಕುರಿತು ಹಿರಿಯ ಅಧಿಕಾರಿಗಳೊಂದಿಗೆ ಸಚಿವ ಜಗದೀಶ್​ ಶೆಟ್ಟರ್​ ಸಭೆ ನಡೆಸಿದ್ದು, ಈ ಕುರಿತು ಪರಿಶೀಲನೆ ನಡೆಸಿದರು. ಸಭೆ ಬಳಿಕ ಮಾತನಾಡಿರುವ ಅವರು ನಮ್ಮ ರಾಜ್ಯದಲ್ಲಿ ಆಕ್ಸಿಜನ್ ಉತ್ಪಾದನೆ ಆಗುತ್ತಿದೆ. ಅದರ ಬಳಕೆಗೆ ನಮಗೆ ಅವಕಾಶ ಮಾಡಿಕೊಡಿ ಎಂದು ಕೇಂದ್ರದ ಬಳಿ ಮನವಿ ಮಾಡಿಕೊಂಡಿದ್ದೇವೆ. ಈ ಕುರಿತು ಕೇಂದ್ರ ಸಚಿವ ಪಿಯೂಶ್​ ಗೊಯಲ್​ ಜೊತೆ ದೂರವಾಣಿ ಮೂಲಕ ಮಾತನಾಡಲಾಗಿದೆ. ಇಂದು ಸಂಜೆ ಕೇಂದ್ರದಿಂದ ಉತ್ತರ ಸಿಗುವ ಸಾಧ್ಯತೆ ಇದೆ ಎಂದರು.

ಆಕ್ಸಿಜನ್​ ಪೂರೈಕೆ ಸಮನ್ವಯತೆ ಜವಾಬ್ದಾರಿ ಹೊತ್ತಿರುವ ಬೆನ್ನಲ್ಲೆ ಈ  ಕುರಿತು ಇಂದು ಬೆಳಗ್ಗೆ ಅಧಿಕಾರಿಗಳೊಂದಿಗೆ ತುರ್ತು ಸಭೆ ನಡೆಸಿದ ಅವರು, ರಾಜ್ಯದಲ್ಲಿನ ಆಕ್ಸಿಜನ್​ ಬಿಕ್ಕಟ್ಟಿನ ಬಗ್ಗೆ ಚರ್ಚೆ ನಡೆಸಿದ್ದಾರೆ. ಬಳಿಕ ಮಾಧ್ಯಮಗಳಿಗೆ ಮಾತನಾಡಿದ ಅವರು, ಇನ್ನು ಆಕ್ಸಿಜನ್ ಟ್ರಾನ್ಸ್‌ಪೋರ್ಟ್‌ ಸಮಸ್ಯೆ ವಿಚಾರ ಕುರಿತು ತಿಳಿಸಿದ ಅವರು, ಆಮ್ಲಜನಕವನ್ನು ಟ್ಯಾಂಕರ್‌ ಮೂಲಕ ಕಳಿಸುವ ಕೆಲಸ ಮಾಡುತ್ತಿದ್ದೇವೆ. ಪ್ರತಿ ದಿನ ಕೆಲಸ ಮಾಡಿ ಸಮಸ್ಯೆ ಸರಿಪಡಿಸಬೇಕು, ನಾಲ್ಕು ದಿನ ಎಂದು ಹೇಳಿದರೆ ಸಮಸ್ಯೆ ಬಗೆಹರಿಯಲ್ಲ. ಪ್ರಾಮಾಣಿಕ ಕೆಲಸ ಮಾಡುತ್ತೇವೆ ಎಂದು ವಿಶ್ವಾಸ ವ್ಯಕ್ತಪಡಿಸಿದರು.

ಲಾಕ್ ಡೌನ್ ಬದಲಾಗಿ ಪರ್ಯಾಯ ಮಾರ್ಗವನ್ನು ಕಂಡುಕೊಳ್ಳಿ : ಸಾಂಕ್ರಾಮಿಕ ರೋಗ ತಜ್ಞ ಫೌಸಿ.

ಸಾಂಕ್ರಾಮಿಕ ರೋಗ ತಜ್ಞ : ಫೌಸಿ

ವಾಷಿಂಗ್ಟನ್ : ಭಾರತದಲ್ಲಿ ಕೋವಿಡ್ ಸೋಂಕಿನ ರೂಪಾಂತರಿ ಅಲೆ ಸಾವು ನೋವುಗಳನ್ನುರಾಷ್ಟ್ರದ ಹೊಸ್ತಿಲಿಗೆ ತಂದು ನಿಲ್ಲಿಸಿದೆ. ದಿನ ನಿತ್ಯ ಕೋವಿಡ್ ಸೋಂಕಿನ ಅಲೆ ತನ್ನ ತೀವ್ರತೆಯನ್ನು ಹೆಚ್ಚಿಸಿಕೊಳ್ಳುತ್ತಿದ್ದು, ಆಕ್ಸಿಜನ್, ಲಸಿಕೆ ಹಾಗೂ ಮೆಡಿಕಲ್ ಸೌಲಭ್ಯಗಳ ಬಗ್ಗೆ ದೇಶದಲ್ಲಿ ವ್ಯಾಪಕ ಚರ್ಚೆಯಾಗುತ್ತಿದೆ.

ದೇಶದಲ್ಲಿ ಕೋವಿಡ್ ರೂಪಾಂತರಿ ತಂದಿಟ್ಟ ಅವಾಂತರದ ಬಗ್ಗೆ ವಿಶ್ವದಾದ್ಯಂತ ಕಳವಳ ವ್ಯಕ್ತವಾಗುತ್ತಿದೆ. ಒಂದೆಡೆ ಸೋಂಕಿನ ನಿಯಂತ್ರಣಕ್ಕೆ ದೇಶದ ಬಹುತೇಕ ರಾಜ್ಯಗಳು ಕಠಿಣ ಕ್ರಮಗಳನ್ನು ಜಾರಿಗೊಳಿಸಿದರೂ ಕೂಡ ಸೋಂಕಿನ ವೇಗ ಕಡಿಮೆಯಾಗುತ್ತಿಲ್ಲ. ಮತ್ತೆ ದೇಶದಾದ್ಯಂತ ಪ್ರಧಾನಿ ನರೇಂದ್ರ ಮೋದಿ ತಮ್ಮ ‘ಕೊನೆಯ ಅಸ್ತ್ರ’ವನ್ನು ಬಳಕೆ ಮಾಡುತ್ತಾರಾ ಎಂಬ ಚಿಂತೆ ಸಾರ್ಚಜನಿಕರಲ್ಲಿ ಕಾಡಿದೆ.

ಕೆಲವು ರಾಜಕೀಯ ನಾಯಕರು, ವೈದ್ಯಕೀಯ ತಜ್ಞರು ದೇಶದ ಪರಿಸ್ಥಿತಿಯನ್ನು ಮುಂದಿಟ್ಟುಕೊಂಡು, ದೇಶದಾದ್ಯಂತ ಲಾಕ್ ಡೌನ್ ಘೋಷಿಸಿ, ಲಾಕ್ ಡೌನ್ ಗೆ ಬದಲಾಗಿ ಪರ್ಯಾಯ ಮಾರ್ಗವನ್ನು ಕಂಡುಕೊಳ್ಳಿ, ಮೆಡಿಕಲ್ ತುರ್ತು ಸೌಲಭ್ಯವನ್ನು ಪೂರೈಸಿ ಎಂದು ಭಿನ್ನ ಭಿನ್ನ ಅಭಿಪ್ರಾಯಗಳನ್ನು ನೀಡುತ್ತಿರುವುದು ಮತ್ತಷ್ಟು ಆತಂಕ, ಗೊಂದಲವನ್ನು ಸೃಷ್ಟಿ ಮಾಡಿದೆ.

ದೇಶದಲ್ಲಿ ಕೋವಿಡ್ ಸೋಂಕಿನ ತೀವ್ರತೆ ಏರಿಕೆಯಾದ ಹಿನ್ನಲೆಯಲ್ಲಿ, ಅಮೆರಿಕದ ಉನ್ನತ ಸಾಂಕ್ರಾಮಿಕ ರೋಗ ತಜ್ಞ ಮತ್ತು ಶ್ವೇತಭವನದ ಮುಖ್ಯ ವೈದ್ಯಕೀಯ ಸಲಹೆಗಾರ ಡಾ. ಆಂಥೋನಿ ಫೌಸಿ ಭಾರತದ ಈಗಿನ ಪರಿಸ್ಥಿತಿಯನ್ನು ನಿಯಂತ್ರಣ ಮಾಡಲು ಲಾಕ್ ಡೌನ್, ಬೃಹತ್ ವ್ಯಾಕ್ಸಿನೇಷನ್ ಮತ್ತು ಹೆಚ್ಚಿನ ಸಂಖ್ಯೆಯ ತಾತ್ಕಾಲಿಕ ಆಸ್ಪತ್ರೆಗಳ ನಿರ್ಮಾಣ ಮಾಡುವುದೊಂದೇ ಮಾರ್ಗ ಎಂದು ಹೇಳಿದ್ದಾರೆ.

ವಿಶ್ವದ ಅಗ್ರ ಪಂಕ್ತಿಯ ಸಾಂಕ್ರಾಮಿಕ ರೋಗ ತಜ್ಞ ಫೌಸಿ ಈ ರೀತಿಯ ಸಲಹೆ ನೀಡಿದ್ದು, ಭಾರತದಲ್ಲಿ ಹಠಾತ್ ಏರಿಕೆಯಾಗುತ್ತಿರುವ ಕೋವಿಡ್ ರೂಪಾಂತರಿಯ ಅಲೆಯ ಬಗ್ಗೆ ಕಳವಳ ಪಟ್ಟಿದ್ದಾರೆ.

ಅನೇಕ ಜನರು ಸೋಂಕಿಗೆ ಒಳಗಾದಾಗ, ಚಿಕಿತ್ಸೆ ಮಾಡಲು ವೈದ್ಯಕೀಯ ಸೌಲಭ್ಯಗಳ  ಕೊರತೆ,  ಆಸ್ಪತ್ರೆಯ ಹಾಸಿಗೆಗಳು ಮತ್ತು ಆಮ್ಲಜನಕದ ಕೊರತೆ ಮತ್ತು ಸರಬರಾಜುಗಳ ಕೊರತೆಯನ್ನು ಹೊಂದಿರುವಾಗ ನಿಜವಾಗಿಯೂ ಹತಾಶ ಪರಿಸ್ಥಿತಿಯಾಗುತ್ತದೆ. ಡಾ. ಫೌಸಿ ಬೇಸರ ವ್ಯಕ್ತ ಪಡಿಸಿದ್ದಾರೆ.

ದೇಶದಲ್ಲಿ ಅಗತ್ಯ ವೈದ್ಯಕೀಯ ಸೌಲಭ್ಯವನ್ನು ಪೂರೈಸುವಲ್ಲಿ ಅಲ್ಲಿನ ಸರ್ಕಾರ ಕಾರ್ಯ ನಿರ್ವಹಿಸಬೇಕು ಇಲ್ಲವಾದಲ್ಲಿ ಪರಿಸ್ಥಿತಿ ಮತ್ತಷ್ಟು ಬಿಗಡಾಯಿಸುವ ಸಂಭವವಿದೆ. ಪರಿಸ್ಥಿತಿ ಹತೋಟಿಗೆ ಬಾರದಿದ್ದಲ್ಲಿ ದೇಶದಾದ್ಯಂತ ಇತರೆ ರಾಷ್ಟ್ರಗಳು ಕಳೆದ ವರ್ಷ ಕಠಿಣ ಲಾಕ್ ಡೌನ್ ಮಾಡಿದಂತೆ ಮಾಡಬೇಕು ಎಂದಿದ್ದಾರೆ.

ಇನ್ನು, ಲಸಿಕೆ ಹಾಕುವುದರಿಂದ ಸಮಸ್ಯೆ ಪರಿಹಾರವಾಗುವುದಿಲ್ಲ, ಇದು ಹಲವಾರು ವಾರಗಳ ಸಮಸ್ಯೆಯನ್ನು ತಡೆಯಲು ಸಹಾಯ ಮಾಡುತ್ತದೆ ಅಷ್ಟೇ ಎಂದು ಅವರು ಹೇಳಿದರು.

“ಭಾರತವು ಈಗಾಗಲೇ ಲಸಿಕೆಯ ಅಭಿಯಾನವನ್ನು ಮಾಡುತ್ತಿದೆ ಎಂದು ನನಗೆ ತಿಳಿದಿದೆ, ಆದ್ದರಿಂದ ನೀವು ಲಸಿಕೆ ಅಭಿಯಾನ ಮಾಡುತ್ತಿಲ್ಲ ಎಂದು ನಾನು ನಿಮಗೆ ಹೇಳುತ್ತಿಲ್ಲ.

ಚೀನಾ ಕಳೆದ ವರ್ಷ ಏನು ಮಾಡಿದೆ, ಏಕಾಏಕಿ ಆಸ್ಟ್ರೇಲಿಯಾ ಏನು ಮಾಡಿತು, ನ್ಯೂಜಿಲೆಂಡ್ ಏನು ಮಾಡಿತು, ಇತರ ದೇಶಗಳು ಏನು ಮಾಡಿದ್ದವು ಎಂಬುದು ತುಲನಾತ್ಮಕವಾಗಿ ಸೀಮಿತ ಅವಧಿಗೆ ಸಂಪೂರ್ಣವಾಗಿ ಲಾಕ್ ಮಾಡುವ ನಿರ್ಧಾರಕ್ಕೆ ಬಂದವು. ಆರು ತಿಂಗಳವರೆಗೆ ಲಾಕ್ ಡೌನ್ ಮಾಡಲು ನಿರ್ಧಾರ ತೆಗೆದುಕೊಂಡವು. ನೀವು ಕೆಲವು ವಾರಗಳವರೆಗೆ ಲಾಕ್ ಡೌನ್ ಮಾಡುವುದು ಉತ್ತಮ. ಇಲ್ಲವಾದಲ್ಲಿ ಸೋಂಕಿನ ಹರಡುವಿಕೆ ಮತ್ತಷ್ಟು ಹೆಚ್ಚಳವಾಗುವುದಕ್ಕೆ ಸಾಧ್ಯವಿದೆ. ಈ ಬಗ್ಗೆ ಗಮನ ಹರಿಸುವುದು ಉತ್ತಮ. ಲಾಕ್ ಡೌನ್ ಮಾತ್ರವಲ್ಲ, ಸೋಂಕಿತರ ಚಿಕಿತ್ಸೆಗೆ ಬೇಕಾದ ಎಲ್ಲಾ ತುರ್ತು ವೈದ್ಯಕೀಯ ಸೌಲಭ್ಯಗಳನ್ನು ಒದಗಿಸುವುದರಲ್ಲಿ ಕಾರ್ಯ ನಿರ್ವಹಿಸಬೇಕಾಗಿರುವುದು ಅಗತ್ಯ  ಎಂದು ಡಾ. ಫೌಸಿ ಹೇಳಿದರು.

ಇನ್ನು ತಾತ್ಕಾಲಿಕ ಆಸ್ಪತ್ರೆಗಳನ್ನು ತಕ್ಷಣ ನಿರ್ಮಿಸಲು ಸಶಸ್ತ್ರ ಪಡೆಗಳ ಸಹಾಯವನ್ನು ತೆಗೆದುಕೊಳ್ಳುವಂತೆ ಅವರು ಸಲಹೆ ನೀಡಿದ್ದಾರೆ.

ಹೆಚ್ಚುತ್ತಿರುವ ಕೊರೊನಾ ಸೋಂಕು ! ಮೊದಲ ಸ್ಥಾನದತ್ತ ಕರ್ನಾಟಕ:

ಸಾಂದರ್ಭಿಕ ಚಿತ್ರ

ಬೆಂಗಳೂರು: ರಾಜ್ಯದಲ್ಲಿ ಸೋಂಕು ತೀವ್ರತೆ ಮತ್ತಷ್ಟು ಹೆಚ್ಚಳವಾಗಿದ್ದು, ಪರೀಕ್ಷೆಗಳ ಪಾಸಿಟಿವಿಟಿ ದರ ಹಿಂದೆಂದಿಗಿಂತಲೂ ಅತಿ ಹೆಚ್ಚು ಶೇ.30 ವರದಿಯಾಗಿದೆ. ಹೆಚ್ಚು ಕಡಿಮೆ ಸೋಂಕು ಪರೀಕ್ಷೆಗೊಳಗಾದ ಮೂವರಲ್ಲಿ ಒಬ್ಬರಿಗೆ ಸೋಂಕು ದೃಢಪಟ್ಟಿದೆ!

ಸೋಮವಾರ ಹೊಸದಾಗಿ 44,438 ಸೋಂಕು ಪ್ರಕರಣಗಳು, 239 ಸೋಂಕಿತರ ಸಾವಾಗಿದೆ. ಈ ಪೈಕಿ ಬೆಂಗಳೂರಿನಲ್ಲಿಯೇ 22,112 ಮಂದಿಗೆ ಸೋಂಕು ತಗುಲಿದ್ದು, 115 ಸಾವಾಗಿದೆ. ಶನಿವಾರಕ್ಕೆ ಹೋಲಿಸಿದರೆ ಸೋಂಕು ಪರೀಕ್ಷೆಗಳು ಆರು ಸಾವಿರದಷ್ಟು ಕುಸಿದಿವೆ. ಆದರೆ, 6705 ಪ್ರಕರಣಗಳು, 22 ಸಾವು ಹೆಚ್ಚಳವಾಗಿವೆ.

ಒಂದು ಪ್ರದೇಶದ ಸೋಂಕಿನ ತೀವ್ರತೆಯನ್ನು ಪರೀಕ್ಷೆಗಳ ಪಾಸಿಟಿವಿಟಿ ದರದ ಮೂಲಕ ಅಳೆಯಲಾಗುತ್ತದೆ. ಸೋಮವಾರ 1,49,090 ಮಂದಿ ಸೋಂಕು ಪರೀಕ್ಷೆಗೊಳಗಾಗಿದ್ದು, ಪಾಸಿಟಿವಿಟಿ ದರ ಶೇ.30 ದಾಖಲಾಗಿದೆ. ಪರೀಕ್ಷೆಗೊಳಗಾಗದ 100 ಮಂದಿಯಲ್ಲಿ 30 ಮಂದಿಗೆ ಸೋಂಕು ದೃಢಪಟ್ಟಿದೆ. ಅಂದರೆ ಹೆಚ್ಚು ಕಡಿಮೆ ಮೂವರಲ್ಲಿ ಒಬ್ಬರಲ್ಲಿ ಸೋಂಕು ಪತ್ತೆಯಾಗಿದೆ.

ಮೊದಲ ಸ್ಥಾನದತ್ತ ಕರ್ನಾಟಕ: ಸದ್ಯ ದೇಶದಲ್ಲಿಯೇ ಅತಿ ಹೆಚ್ಚು ಸೋಂಕು ಪ್ರಕರಣಗಳು ಮಹಾರಾಷ್ಟ್ರದಲ್ಲಿ ಪತ್ತೆಯಾಗುತ್ತಿವೆ. ಕರ್ನಾಟಕ ಎರಡನೇ ಸ್ಥಾನದಲ್ಲಿದೆ. ಆದರೆ, ಕಳೆದ ಒಂದು ವಾರದಿಂದ ಮಹಾರಾಷ್ಟ್ರ ಪ್ರಕರಣಗಳು ಇಳಿಮುಖವಾಗಿದೆ, 70 ಸಾವಿರದಿಂದ 50 ಸಾವಿರ ಆಸುಪಾಸಿಗೆ ಬಂದಿವೆ. ಆದರೆ, ಕರ್ನಾಟಕವು ಮಾತ್ರ ಏರಿಕೆ ಹಾದಿ ಮುಂದುವರೆಸಿದ್ದು, ದಿನದಿಂದ ದಿನಕ್ಕೆ ದಾಖಲೆಯ ಪಾಸಿಟಿವಿಟಿ ದರ ವರದಿಯಾಗುತ್ತಿದೆ.

ಸೋಮವಾರ ಮಹಾರಾಷ್ಟ್ರದಲ್ಲಿ (48,621) ಕರ್ನಾಟಕಕ್ಕಿಂತ ನಾಲ್ಕು ಸಾವಿರ ಅಧಿಕ ಪ್ರಕರಣಗಳು ವರದಿಯಾಗಿವೆ. ರಾಜ್ಯದಲ್ಲಿ ಸೋಂಕಿನ ತೀವ್ರತೆ ಹೀಗೆಯೇ ಮುಂದುವರಿದರೆ ಇನ್ನೆರಡು ದಿನಗಳಲ್ಲಿಯೇ ಕರ್ನಾಟಕ ಮೊದಲ ಸ್ಥಾನಕ್ಕೇರುವ ಸಾಧ್ಯತೆಗಳಿವೆ.

ಬೆಂಗಳೂರು ನಂ1: ಮಹಾನಗರಗಳ ಪೈಕಿ ಅತಿ ಹೆಚ್ಚು ಪ್ರಕರಣಗಳು ಪತ್ತೆಯಾಗುವ ಮೂಲಕ ಬೆಂಗಳೂರು ಮೊದಲ ಸ್ಥಾನಕ್ಕೇರಿದೆ. ದೆಹಲಿ, ಪುಣೆ ನಂತರದ ಸ್ಥಾನದಲ್ಲಿವೆ.

ಡಬಲ್‌ ಮ್ಯುಟೆಂಟ್‌ ವೈರಸ್‌ ಕಾಟ: ರಾಜ್ಯದಲ್ಲಿ ಕೊರೊನಾ ಎರಡನೇ ಅಲೆ ವ್ಯಾಪಕವಾಗಿರುವ ಬೆನ್ನಲ್ಲೇ ಡಬಲ್‌ ಮ್ಯೂಟೆಂಟ್‌ /ಬಿ.1.617 ವೈರಸ್‌ ಕಾಟವೂ ಹೆಚ್ಚಳವಾಗಿದೆ. ಕಳೆದ ಮಂಗಳವಾರ 20 ಮಂದಿಯಲ್ಲಿ ಪತ್ತೆಯಾಗಿ ಆತಂಕ ಸೃಷ್ಟಿಸಿತ್ತು. ಇದೀಗ ಒಂದೇ ವಾರದಲ್ಲಿ ಡಬಲ್‌ ಮ್ಯೂಟೆಂಟ್‌ ಸೋಂಕಿತರ ಸಂಖ್ಯೆ 62ಕ್ಕೆ ಏರಿಕೆಯಾಗಿದೆ.

ಕೊರೊನಾ ಸೋಂಕು ತಡೆಗಟ್ಟಲು ಕರ್ಫ್ಯೂ, ಲಾಕ್ ಡೌನ್ ಪರಿಗಣಿಸಿ : ಸುಪ್ರೀಂ ಕೋರ್ಟ್.

ಸಾಂದರ್ಭಿಕ ಚಿತ್ರ

ನವದೆಹಲಿ : ದೇಶದಲ್ಲಿ ತೀವ್ರಗತಿಯಲ್ಲಿ ಏರಿಕೆಯಾಗುತ್ತಿರುವ ಕೊರೊನಾ ಸೋಂಕು ಪ್ರಕರಣಗಳಿಗೆ ಕಡಿವಾಣ ಹಾಕಲು ‘ಸಾರ್ವಜನಿಕ ಹಿತಾಸಕ್ತಿ ದೃಷ್ಟಿ’ಯಿಂದ ಲಾಕ್‌ಡೌನ್‌ ಹೇರುವ ಸಾಧ್ಯತೆಗಳನ್ನು ಪರಿಶೀಲಿಸಬೇಕು ಎಂದು ಸರ್ವೋಚ್ಚ ನ್ಯಾಯಾಲಯವು ಸೋಮವಾರ ಕೇಂದ್ರ ಸರ್ಕಾರಕ್ಕೆ ತಿಳಿಸಿದೆ.
 https://amzn.to/33e4pqk

ಪೀಠದ ಅಧ್ಯಕ್ಷತೆ ವಹಿಸಿದ್ದ ನ್ಯಾಯಮೂರ್ತಿ ಡಿ.ವೈ ಚಂದ್ರಚೂಡ್‌ ಅವರು ಈ ಮಾತು ಹೇಳಿದರು. ಹೆಚ್ಚುತ್ತಿರುವ ಸೋಂಕಿನ ಹಿನ್ನೆಲೆಯಲ್ಲಿ ಭವಿಷ್ಯದ ಕಾರ್ಯಸೂಚಿ, ಕಾರ್ಯಕ್ರಮಗಳ ಕುರಿತು ಮೇ 10ರೊಳಗೆ ವರದಿ ಸಲ್ಲಿಸಬೇಕು ಎಂದು ಪೀಠ ಕೇಂದ್ರ, ರಾಜ್ಯ ಸರ್ಕಾರಗಳಿಗೆ ಸೂಚಿಸಿತು.
 
ಸೋಂಕು ತಡೆ ಕ್ರಮವಾಗಿ ವಿವಿಧ ರಾಜ್ಯಗಳಲ್ಲಿ ಕರ್ಫ್ಯೂಜಾರಿ ಸೇರಿದಂತೆ ಕೆಲವೊಂದು ನಿರ್ಬಂಧಗಳನ್ನು ವಿಧಿಸಿರುವಂತೆಯೇ ಸುಪ್ರೀಂ ಕೋರ್ಟ್ ಈ ಸಲಹೆ ನೀಡಿದೆ. ಸ್ವಯಂಪ್ರೇರಿತವಾಗಿ ಕೈಗೊಂಡ ಪ್ರಕರಣ ಕುರಿತು ಭಾನುವಾರ ಆದೇಶವನ್ನು ಬಿಡುಗಡೆ ಮಾಡಲಾಗಿದೆ.
 
‘ಲಾಕ್‌ಡೌನ್‌ನಿಂದಾಗುವ ಮುಖ್ಯವಾಗಿ ಸಮಾಜದ ನಿರ್ಲಕ್ಷ್ಯಿತ ಸಮುದಾಯಗಳ ಮೇಲೆ, ಒಟ್ಟಾಗಿ ಸಾಮಾಜಿಕ ಮತ್ತು ಆರ್ಥಿಕ ಪರಿಣಾಮಗಳ ಅರಿವು ನಮಗಿದೆ. ಒಂದು ವೇಳೆ ಲಾಕ್‌ಡೌನ್‌ ಅನ್ನು ಜಾರಿಗೊಳಿಸಿದರೆ, ಈ ವರ್ಗಗಳ ಅಗತ್ಯಗಳನ್ನು ಈಡೇರಿಸಲು ಸೂಕ್ತ ಕ್ರಮ ಜರುಗಿಸಬೇಕು‘ ಎಂದು ಸ್ಪಷ್ಟಪಡಿಸಿದೆ.
 
ಅಗತ್ಯ ಔಷಧಗಳು, ಆಮ್ಲಜನಕ ಮತ್ತು ಲಸಿಕೆಗಳನ್ನು ಖರೀದಿಸುವುದಕ್ಕೆ ಇರುವ ನೀತಿಯನ್ನು ಮರುಪರಿಶೀಲಿಸಬೇಕು ಎಂದು ಕೇಂದ್ರ ಸರ್ಕಾರಕ್ಕೆ ಸಲಹೆ ಮಾಡಿದ ಸುಪ್ರೀಂ ಕೋರ್ಟ್, ಆರೋಗ್ಯ ಆರೈಕೆ ಸಿಬ್ಬಂದಿ, ವೈದ್ಯರ ಕುಶಲವನ್ನು ಗಮನಿಸಬೇಕು ಎಂದು ಹೇಳಿದೆ.
 
‘ಇಂಥ ಸುರಕ್ಷತಾ ಕ್ರಮಗಳು ಕೇವಲ ವೈದ್ಯರಿಗಷ್ಟೇ ಅಲ್ಲ, ದಾದಿಯರು, ಆಸ್ಪತ್ರೆ ಸಿಬ್ಬಂದಿ, ಆಂಬುಲೆನ್ಸ್‌ ಸಿಬ್ಬಂದಿ, ಸ್ವಚ್ಚತಾ ಸಿಬ್ಬಂದಿ, ಚಿತಾಗಾರದಲ್ಲಿ ಕಾರ್ಯನಿರ್ವಹಿಸುವ ಸಿಬ್ಬಂದಿ ಹಿತವನ್ನು ಈ ಪಿಡುಗಿನ ಸಂದರ್ಭದಲ್ಲಿ ಗಮನಿಸಬೇಕು’ ಎಂದು ತಿಳಿಸಿತು.
ನ್ಯಾಯಮೂರ್ತಿಗಳಾದ ಎಲ್‌.ನಾಗೇಶ್ವರರಾವ್ ಮತ್ತ ಎಸ್.ರವೀಂದ್ರ ಭಟ್ ಸೇರಿದಂತೆ ಮೂವರ ಸದಸ್ಯರುಳ್ಳ ಪೀಠವು , ಆರೋಗ್ಯ ಕಾರ್ಯಕರ್ತರಿಗೆ ಜಾರಿಗೊಳಿಸಿದ್ದ ಪ್ರಧಾನಮಂತ್ರಿ ಗರೀಬ್ ಕಲ್ಯಾಣ್‌ ವಿಮಾ ಭದ್ರತೆ ಯೋಜನೆಯ ಅವಧಿಯನ್ನು ಒಂದು ವರ್ಷ ವಿಸ್ತರಿಸಿರುವುದನ್ನು ಗಣನೆಗೆ ತೆಗೆದುಕೊಂಡಿತು.
ಯೋಜನೆಯಡಿ 168 ವೈದ್ಯರು ಸೇರಿದಂತೆ ಕೇವಲ 287 ಜನರ ಕುಟುಂಬಗಳಿಗೆ ಸಂಬಂಧಿಸಿದ ಕ್ಲೇಮುಗಳನ್ನಷ್ಟೇ ಇತ್ಯರ್ಥಪಡಿಸಿರುವುದನ್ನೂ ಅದು ಉಲ್ಲೇಖಿಸಿದೆ.

ಆಮ್ಲಜನಕ ಕೊರತೆಯಿಂದ ಮೃತಪಟ್ಟ 24 ಜನರ ಸಾವಿಗೆ ರಾಜ್ಯ ಸರ್ಕಾರವೇ ಕಾರಣ : ಸಿದ್ದರಾಮಯ್ಯ.

ಕರ್ನಾಟಕ ವಿಧಾನ ಸಭಾ ವಿರೋಧ ಪಕ್ಷದ ನಾಯಕರು ಸಿದ್ದರಾಮಯ್ಯನವರು.

ಬೆಂಗಳೂರು : ಚಾಮರಾಜನಗರ ಜಿಲ್ಲಾ ಆಸ್ಪತ್ರೆಯಲ್ಲಿ ಆಮ್ಲಜನಕದ ಕೊರತೆಯಿಂದ 24 ಮಂದಿ ಕೋವಿಡ್ ರೋಗಿಗಳು ಮೃತಪಟ್ಟಿರುವುದಕ್ಕೆ ರಾಜ್ಯ ಸರ್ಕಾರವೇ ಹೊಣೆ ಎಂದು ವಿಧಾನಸಭೆ ವಿರೋಧ ಪಕ್ಷದ ನಾಯಕ ಸಿದ್ದರಾಮಯ್ಯ ಆರೋಪಿಸಿದರು.

ಸೋಮವಾರ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ‘ರಾಜ್ಯ ಸರ್ಕಾರದ ವೈಫಲ್ಯದಿಂದ 24 ಜನರು ಪ್ರಾಣ ಕಳೆದುಕೊಂಡಿದ್ದಾರೆ. ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ, ಆರೋಗ್ಯ ಸಚಿವ ಡಾ.ಕೆ. ಸುಧಾಕರ್ ಮತ್ತು ಚಾಮರಾಜನಗರ ಜಿಲ್ಲಾ ಉಸ್ತುವಾರಿ ಸಚಿವ ಎಸ್. ಸುರೇಶ್ ಕುಮಾರ್ ನೇರವಾಗಿ ಘಟನೆಯ ಹೊಣೆ ಹೊತ್ತುಕೊಳ್ಳಬೇಕು. ಜಿಲ್ಲಾ ಉಸ್ತುವಾರಿ ಸಚಿವರು ತಕ್ಷಣ ರಾಜೀನಾಮೆ ನೀಡಬೇಕು’ ಎಂದು ಸಿದ್ದರಾಮಯ್ಯನವರು ಆಗ್ರಹಿಸಿದರು.

ಚಾಮರಾಜನಗರ ಜಿಲ್ಲೆಗೆ ಮೈಸೂರಿನಿಂದ ಆಮ್ಲಜನಕ ಪೂರೈಕೆಯಾಗುತ್ತದೆ. ಶುಕ್ರವಾರದಿಂದಲೇ ಸಮಸ್ಯೆ ಆರಂಭವಾಗಿತ್ತು. ಆದರೆ, ಸರ್ಕಾರ ಎಚ್ಚೆತ್ತುಕೊಂಡು ಕ್ರಮ ಜರುಗಿಸಲಿಲ್ಲ. ಸರ್ಕಾರದ ನಿರ್ಲಕ್ಷ್ಯದಿಂದ ದುರಂತ ಸಂಭವಿಸಿದೆ ಎಂದು ಸಿದ್ದರಾಮಯ್ಯ ದೂರಿದರು.
ಚಾಮರಾಜನಗರ ಜಿಲ್ಲೆಗೆ ಅಗತ್ಯಕ್ಕಿಂತಲೂ ಕಡಿಮೆ ಪ್ರಮಾಣದ ಆಮ್ಲಜನಕದ ಪೂರೈಕೆಯಾಗಿದೆ. ಘಟನೆಯ ಕುರಿತು ನ್ಯಾಯಾಂಗ ತನಿಖೆ ನಡೆಸಬೇಕು. ದುರಂತಕ್ಕೆ ಕಾರಣರಾದವರ ವಿರುದ್ಧ ಕಠಿಣ ಕ್ರಮ ಜರುಗಿಸಬೇಕು ಎಂದು ಆಗ್ರಹಿಸಿದರು

ಐಪಿಲ್ ಗೂ ಆಘಾತ ತಂದ ಕೋವಿಡ್ : ಚೆನ್ನೈ ಸೂಪರ್ ಕಿಂಗ್ಸ್ ನ ಇಬ್ಬರಿಗೆ ಪಾಸಿಟಿವ್.

ಚೆನ್ನೈ ಸೂಪರ್ ಕಿಂಗ್ಸ್ ತಂಡ

ನವದೇಹಲಿ : ದೇಶದಲ್ಲಿ ಕೋವಿಡ್ 19 ಸೋಂಕಿತರ ಸಂಖ್ಯೆ ಹೆಚ್ಚುತ್ತಿದ್ದಂತೆ ಐಪಿಎಲ್ ಮೇಲೂ ಆತಂಕ ಮೂಡಿಸಿದೆ. ಕೋಲ್ಕತ್ತಾ ನೈಟ್ ರೈಡರ್ಸ್ ನ ಇಬ್ಬರು ಆಟಗಾರರಿಗೆ ಕೋವಿಡ್ ಪಾಸಿಟಿವ್ ಆದ ಬೆನ್ನಲ್ಲೇ ಚೆನ್ನೈ ಸೂಪರ್ ಕಿಂಗ್ಸ್ ನ ಇಬ್ಬರು ಸದಸ್ಯರಿಗೆ ಕೋವಿಡ್ ಪಾಸಿಟಿವ್ ದೃಢವಾಗಿದೆ.

ಚೆನ್ನೈ ಸೂಪರ್ ಕಿಂಗ್ಸ್ ತಂಡದ ಸಿಇಓ ಕಾಶಿ ವಿಶ್ವನಾಥನ್ ಮತ್ತು ಬೌಲಿಂಗ್ ಕೋಚ್ ಲಕ್ಷ್ಮೀಪತಿ ಬಾಲಜಿ ಅವರಿಗೆ ಕೋವಿಡ್ ಸೋಂಕು ದೃಢವಾಗಿದೆ. ಅಷ್ಟೇ ಅಲ್ಲದೆ ತಂಡದ ಬಸ್ ಕ್ಲೀನರ್ ಕೂಡಾ ಕೋವಿಡ್ ಸೋಂಕಿಗೆ ಒಳಗಾಗಿದ್ದಾರೆ.

ರವಿವಾರ ತಂಡದ ಎಲ್ಲಾ ಸದಸ್ಯರಿಗೂ ಕೋವಿಡ್ ಪರೀಕ್ಷೆ ನಡೆಸಲಾಗಿತ್ತು. ಇಂದು ಇದರ ವರದಿ ಬಂದಿದ್ದು, ಯಾವುದೇ ಆಟಗಾರರಿಗೆ ಸೋಂಕು ದೃಢಪಟ್ಟಿಲ್ಲ.

ವರದಿ ಬರುತ್ತಿದ್ದಂತೆ ತಂಡದ ಅಭ್ಯಾಸವನ್ನು ರದ್ದು ಮಾಡಲಾಗಿದೆ. ಧೋನಿ ಬಳಗ ತನ್ನ ಮುಂದಿನ ಪಂದ್ಯವನ್ನು ರಾಜಸ್ಥಾನ್ ರಾಯಲ್ಸ್ ವಿರುದ್ಧ ಬುಧವಾರ ಆಡಲಿದೆ. ಆದರೆ ಈ ಪಂದ್ಯ ನಡೆಯುವ ಬಗ್ಗೆ ಇನ್ನೂ ಖಚಿತ ಮಾಹಿತಿ ಲಭ್ಯವಾಗಿಲ್ಲ.

ಕಳೆದ ವರ್ಷದ ಕೂಟದ ಆರಂಭದಲ್ಲಿ ಸಿಎಸ್ ಕೆ ತಂಡದ ಆರಂಭಿಕ ಆಟಗಾರ ರುತುರಾಜ್ ಗಾಯಕ್ ವಾಡ್ ಮತ್ತು ಬೌಲರ್ ದೀಪಕ್ ಚಹರ್ ಗೆ ಕೋವಿಡ್ ಸೋಂಕು ದೃಢವಾಗಿತ್ತು.


WhatsApp
Follow by Email